ಪಿಎಂಇಜಿಪಿ: ಉದ್ಯೋಗಕ್ಕೆ ಸಾಲ ನೀಡಿಕೆ
ಕೋಲಾರ: ‘ಕೇಂದ್ರ ಸರ್ಕಾರದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗ ಯೋಜನೆ ಹಾಗೂ ಪ್ರಧಾನಮಂತ್ರಿ ರೋಜ್ಗಾರ್ ಯೋಜನೆಯನ್ನು ಒಗ್ಗೂಡಿಸಿ ಹೊಸದಾಗಿ ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ರೂಪಿಸಲಾಗಿದೆ. ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ’ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದರು.
ಪಿಎಂಇಜಿಪಿ ಕುರಿತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ‘ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಪಿಎಂಇಜಿಪಿ ಯೋಜನೆಯಡಿ ಸಾಲ ನೀಡಲಾಗುತ್ತದೆ’ ಎಂದು ವಿವರಿಸಿದರು.
‘ರಾಷ್ಟ್ರೀಕೃತ ಬ್ಯಾಂಕ್ಗಳ ಜತೆಗೆ ಖಾಸಗಿ ಬ್ಯಾಂಕ್ಗಳಿಂದಲೂ ಪಿಎಂಇಜಿಪಿ ಯೋಜನೆಯಡಿ ಸಾಲ ನೀಡಲಾಗುತ್ತದೆ. ಫಲಾನುಭವಿಗಳು ಯಾವುದೇ ತೊಂದರೆಗಳಿದ್ದರೆ ಅರ್ಜಿ ಮೂಲಕ ನೀಡಿದರೆ ಬಗೆಹರಿಸುತ್ತೇವೆ. ಫಲಾನುಭವಿಗಳು ಎಲ್ಲಿ ವ್ಯಾಪಾರ ಮಾಡಲು ಇಚ್ಚಿಸುತ್ತಾರೋ ಅದನ್ನು ಗುರುತಿಸಿ ದಾಖಲೆಗಳು ಸರಿ ಇವೆಯೇ ಎಂದು ತಿಳಿದು, ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ’ ಎಂದು ಹೇಳಿದರು.
‘ಸಾಲ ಪಡೆಯುವ ಫಲಾನುಭವಿಗಳು ನೇರವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಗರ ಪ್ರದೇಶದಲ್ಲಿ ಕೈಗಾರಿಕೆ ಮತ್ತು ಉದ್ದಿಮೆಯನ್ನು ಸ್ಥಾಪಿಸಲು ಜನಸಂಖ್ಯಾ ಮಾಹಿತಿ ಬೇಡ. ಆದರೆ ಗ್ರಾಮೀಣ ಪ್ರದೇಶದಲ್ಲಿ ಅವಶ್ಯಕತೆ ಇರುತ್ತದೆ. ದಲ್ಲಾಳಿಗಳ ಮೊರೆ ಹೋಗದೆ ನೇರವಾಗಿ ಬಂದು ಅರ್ಜಿ ಸಲ್ಲಿಸಬೇಕು’ ಎಂದು ಸೂಚಿಸಿದರು.
‘ಉದ್ದಿಮೆ ಸ್ಥಾಪಿಸಲು ಬ್ಯಾಂಕ್ನಲ್ಲಿ ಸಾಲಕ್ಕೆ ಅರ್ಜಿ ಹಾಕಿದಾಗ ಶೇ 25ರಷ್ಟು ತೆರಿಗೆ ಪಾವತಿ ಮಾಡಬೇಕು. ಇಲಾಖೆಯ ಮೂಲಕ ಹೋದರೆ ಶೇ 5ರಷ್ಟು ತೆರಿಗೆ ಇರುತ್ತದೆ. ಇದನ್ನು ಎಲ್ಲರೂ ಬಳಸಿಕೊಳ್ಳಿ ಮತ್ತು ಸಾಲ ಪಡೆಯಲು ಅಗತ್ಯ ದಾಖಲೆಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು’ ಎಂದು ಮಾಹಿತಿ ನೀಡಿದರು.
ಗೊಂದಲ ಪರಿಹರಿಸಿಕೊಳ್ಳಿ: ‘ಪಿಎಂಇಜಿಪಿ ಯೋಜನೆಯಡಿ ಯಾವ ಸೌಲಭ್ಯಗಳು ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಫಲಾನುಭವಿಗಳಿಗೆ ಯಾವುದೇ ಗೊಂದಲವಿದ್ದರೆ ಪರಿಹರಿಸಿಕೊಳ್ಳಿ. ಸಾಲದ ಮೊತ್ತ ₹ 10 ಲಕ್ಷವಿದ್ದರೆ ಯಾವುದೇ ತೊಂದರೆಯಾಗುವುದಿಲ್ಲ. ಹೆಚ್ಚಿನ ಮೊತ್ತವಾದರೆ ಫಲಾನುಭವಿಗಳ ಸಂಪೂರ್ಣ ಮಾಹಿತಿಯನ್ನು ತಿಳಿದು ಸಾಲ ನೀಡಲಾಗುತ್ತದೆ’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚ್ಚಯ್ಯ ವಿವರಿಸಿದರು.
‘ಒಂದು ಕುಟುಂಬಕ್ಕೆ, ಒಂದು ಘಟಕಕ್ಕೆ ಮಾತ್ರ ಸಾಲ ಪಡೆಯಲು ಅವಕಾಶವಿರುತ್ತದೆ. ಯೋಜನೆಯಡಿ ಕೈಗಾರಿಕೆಗಳ ಸ್ಥಾಪನೆಗೆ ನೀಡಲಾಗುವ ಸಾಲದ ಮಿತಿ ₹ 25 ಲಕ್ಷ’ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.