ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್ ಕೊಲೆ ಪ್ರಕರಣ: ಸಿಬ್ಬಂದಿಗೆ ಪೊಲೀಸರ ಬೆದರಿಕೆ, ಡಿಸಿ ಅಸಮಾಧಾನ

ಬಂಗಾರಪೇಟೆ ತಹಶೀಲ್ದಾರ್‌ ಚಂದ್ರಮೌಳೇಶ್ವರ ಕೊಲೆ ಪ್ರಕರಣ
Last Updated 18 ಜುಲೈ 2020, 16:19 IST
ಅಕ್ಷರ ಗಾತ್ರ

ಕೋಲಾರ: ಬಂಗಾರಪೇಟೆ ತಹಶೀಲ್ದಾರ್‌ ಚಂದ್ರಮೌಳೇಶ್ವರ ಕೊಲೆ ಪ್ರಕರಣ ಸಂಬಂಧ ಹಿರಿಯ ಪೊಲೀಸ್‌ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಕಂದಾಯ ಇಲಾಖೆ ಸಿಬ್ಬಂದಿಯನ್ನು ಬೆದರಿಸಿದ್ದು, ಪೊಲೀಸರ ವರ್ತನೆಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತಹಶೀಲ್ದಾರ್‌ರ ಕೊಲೆಗೆ ಪೊಲೀಸರ ವೈಫಲ್ಯವೇ ಕಾರಣ. ಪೊಲೀಸರು ತಮ್ಮ ವೈಫಲ್ಯ ಮರೆಮಾಚಲು ಇದೀಗ ವಿಚಾರಣೆ ನೆಪದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಇಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಎದುರು ಗಂಭೀರ ಆರೋಪ ಮಾಡಿದರು.

‘ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ ಅವರು ಕಂದಾಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ವಿಚಾರಣೆಗೆ ಬರದಿದ್ದರೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಸಿಬ್ಬಂದಿಯನ್ನು ವಿಚಾರಣೆಗೆ ಕಳುಹಿಸುವಂತೆ ನನಗೆ ಪತ್ರ ಬರೆದಿದ್ದಾರೆ’ ಎಂದು ಹೇಳಿದರು.

‘ಪೊಲೀಸ್‌ ಅಧಿಕಾರಿಗಳು ನೋಟಿಸ್‌ ಹಾಗೂ ಕರೆ ಮೂಲಕ ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಒತ್ತಡ ತಂದು ತಮಗೆ ಬೇಕಾದಂತೆ ಹೇಳಿಕೆ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ನನ್ನ ಸಮ್ಮುಖದಲ್ಲಿ ಸಿಬ್ಬಂದಿಯ ವಿಚಾರಣೆ ನಡೆಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ನ್ಯಾಯ ಒದಗಿಸಬೇಕು: ‘ಘಟನಾ ದಿನ ತಹಶೀಲ್ದಾರ್‌ರ ಸೂಚನೆಯಂತೆ ಪೊಲೀಸ್‌ ಸಿಬ್ಬಂದಿ ಸ್ಥಳದಿಂದ ನಿರ್ಗಮಿಸಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಪೊಲೀಸರ ವೈಫಲ್ಯವಿಲ್ಲ ಎಂಬ ಧಾಟಿಯ ಮಾತು ಕೇಳಿಬರುತ್ತಿವೆ. ಇದು ಪೊಲೀಸರ ವೈಫಲ್ಯ ಮರೆಮಾಚುವ ಸಂಚು. ತಹಶೀಲ್ದಾರ್‌ ಸಾವಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆ ಆಗಬೇಕು. ಪೊಲೀಸರ ವಿಚಾರಣೆ ಹಾಗೂ ತನಿಖಾ ಕಾರ್ಯಕ್ಕೆ ನಾವು ಅಡ್ಡಿಪಡಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT