ಶುಕ್ರವಾರ, ಡಿಸೆಂಬರ್ 3, 2021
26 °C
ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಿ: ಜಿಲ್ಲಾಧಿಕಾರಿ ಸೆಲ್ವಮಣಿ ಖಡಕ್‌ ಎಚ್ಚರಿಕೆ

ಕೆರೆ ಒತ್ತುವರಿ: ಮುಲಾಜಿಲ್ಲದೆ ತೆರವುಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೆರೆಗಳನ್ನು ಒತ್ತುವರಿ ಮಾಡುವುದು ತಪ್ಪು. ಕೆರೆಗಳ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಿ ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಜಿಲ್ಲೆಯ ಮಾಲೂರು ತಾಲ್ಲೂಕಿನ ವಪ್ಪಚ್ಚಹಳ್ಳಿಯಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ನೀರಿಗೆ ಪ್ರಮುಖ ಆಸರೆಯಾದ ಕೆರೆಗಳನ್ನು ಸಂರಕ್ಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಕೆರೆಗಳ ಸರ್ವೆ ಮಾಡಿ ಕೆರೆಯ ಸುತ್ತಲೂ ಒಂದು ಅಡಿ ಆಳಕ್ಕೆ ಮಣ್ಣು ತೆಗೆಯಬೇಕು’ ಎಂದು ಸೂಚಿಸಿದರು.

ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ, ‘ಗ್ರಾಮಗಳಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಅಕ್ಕ-ಪಕ್ಕದವರು ಜಾಗ ಬಿಟ್ಟುಕೊಟ್ಟರೆ ಇಡೀ ಊರಿಗೆ ಅನುಕೂಲವಾಗುತ್ತದೆ. ಚರಂಡಿಯಲ್ಲಿ ಕೊಳಚೆ ನೀರು ನಿಲ್ಲದಂತೆ ಮಾಡಿ. ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಸರಿಯಾಗಿ ಅಳವಡಿಸಿ’ ಎಂದು ತಿಳಿಸಿದರು.

‘ಗ್ರಾಮದ ಪುರಾತನ ದೇವಾಲಯ ಮತ್ತು ಕಲ್ಯಾಣಿಯನ್ನು ಪಿಡಿಒಗಳು ಗ್ರಾಮಸ್ಥರ ಸಹಾಯದಿಂದ ಸ್ವಚ್ಛಗೊಳಿಸಬೇಕು. ಕೊಳಚೆ ನೀರು ನಿಂತಿರುವ ಗುಂಡಿಗಳನ್ನು ಮುಚ್ಚಬೇಕು. ನೈರ್ಮಲ್ಯ ಸಮಸ್ಯೆ ಎದುರಾದರೆ ಸೊಳ್ಳೆಗಳ ಉತ್ತತ್ತಿ ಹೆಚ್ಚಿ ಜನರು ರೋಗಕ್ಕೆ ತುತ್ತಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ರುದ್ರಭೂಮಿಗೆ ಜಮೀನು: ‘ಗ್ರಾಮದ ರುದ್ರಭೂಮಿಗೆ ಜಮೀನು ನೀಡಬೇಕು. ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ದಿನದಲ್ಲಿ ಬೆಳಿಗ್ಗೆ ಒಂದು ಬಾರಿ ಮಾತ್ರ ಬರುತ್ತಿದೆ. ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಶಾಲಾ ಮಕ್ಕಳು ಸಂಜೆ ತುಂಬಾ ದೂರದಿಂದ ನಡೆದುಕೊಂಡು ಗ್ರಾಮಕ್ಕೆ ಬರುತ್ತಿದ್ದಾರೆ. ಆದ್ದರಿಂದ ಸಂಜೆ ಸಮಯದಲ್ಲೂ ಗ್ರಾಮಕ್ಕೆ ಬಸ್‌ ಬರುವಂತೆ ವ್ಯವಸ್ಥೆ ಮಾಡಿ. ಕೆರೆಯ ಕಟ್ಟೆ ಶಿಥಿಗೊಂಡಿದೆ ಮತ್ತು ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ರಿಪೇರಿ ಮಾಡಿಸಿ’ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಗ್ರಾಮದಲ್ಲಿ ರುದ್ರಭೂಮಿಗೆ ಸರ್ಕಾರಿ ಜಮೀನು ಗುರುತಿಸಿ ಸರ್ವೆ ಮಾಡಿ ಮಂಜೂರು ಮಾಡುತ್ತೇವೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ವ್ಯವಸ್ಥೆ ಮಾಡಲಾಗುವುದು. ನರೇಗಾ ಯೋಜನೆಯಡಿ ಕೆರೆ ಕಟ್ಟೆ ದುರಸ್ತಿ ಮಾಡಿಸುತ್ತೇವೆ. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಗುತ್ತಿಗೆದಾರರ ಬದಲಿಗೆ ಗ್ರಾಮ ಪಂಚಾಯಿತಿಗೆ ವಹಿಸುತ್ತೇವೆ’ ಎಂದು ಹೇಳಿದರು.

ಬೆಳೆ ಸಮೀಕ್ಷೆ: ‘ಇಲಾಖೆಯಿಂದ ರೈತರಿಗೆ ರಾಗಿ, ಅಲಸಂದೆ, ತೊಗರಿ ಬಿತ್ತನೆ ಬೀಜ ನೀಡಲಾಗುತ್ತಿದೆ. 2021–22ನೇ ಸಾಲಿನಲ್ಲಿ ರೈತರು ಬೆಳೆದ ಬೆಳೆಯನ್ನು ತಾವೇ ಸಮೀಕ್ಷೆ ಮಾಡಿ ಆ್ಯಪ್ ಮೂಲಕ ನೋಂದಾಯಿಸಬಹುದು. ಬೆಳೆ ಸಮೀಕ್ಷೆಯಿಂದ ಬರ ಅಥವಾ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ನೀಡಲು ಸಹಾಯವಾಗುತ್ತದೆ’ ಎಂದು ಕೃಷಿ ಇಲಾಖೆ ಮಾಲೂರು ಸಹಾಯಕ ಕೃಷಿ ನಿರ್ದೇಶಕ ಚಂದ್ರಪ್ಪ ವಿವರಿಸಿದರು.

‘ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ ಅನುಷ್ಠಾನಗೊಳಿಸಿದ್ದು, ರಾಜ್ಯದಲ್ಲಿ ಸರ್ಕಾರದ ವತಿಯಿಂದ 46 ಹನಿ ನೀರಾವರಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಇಚ್ಛೆಯುಳ್ಳ ರೈತರು ಇಲಾಖೆಯನ್ನು ಸಂಪರ್ಕಿಸಬಹುದು’ ಎಂದು ತೋಟಗಾರಿಕೆ ಇಲಾಖೆ ಮಾಲೂರು ಹಿರಿಯ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ಉಪ ವಿಭಾಗಾಧಿಕಾರಿ ಆನಂದ್‌ಪ್ರಕಾಶ್ ಮೀನಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ವಿ.ಡಿ.ರೂಪಾದೇವಿ, ಮಾಲೂರು ತಹಶೀಲ್ದಾರ್ ಕೆ.ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು