ಬಂಗಾರಪೇಟೆ: ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣೇಶ ಮೂರ್ತಿ ಮಾರಾಟ ಮತ್ತು ಪ್ರತಿಷ್ಠಾಪನೆಯನ್ನು ನಿಷೇಧಿಸಿದ್ದರು. ಹಲವು ಕಡೆ ಪಿಒಪಿ ಮೂರ್ತಿ ಮಾರಾಟ ಮತ್ತು ಸ್ಥಾಪಿಸುತ್ತಿರುವ ದೂರು ಬಂದಿದ್ದು, ಈ ಬಗ್ಗೆ ಪರಿಶೀಲನೆ ಮಾಡುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ತಹಶೀಲ್ದಾರ್ ವೆಂಕಟೇಶಪ್ಪ ತಿಳಿಸಿದರು.
ಪಟ್ಟಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಪಿಒಪಿ ಮಾರಾಟ ಮತ್ತು ಪ್ರತಿಷ್ಠಾಪನೆಗೆ ನಿರ್ಬಂಧ ವಿಧಿಸಿರುವ ಬಗ್ಗೆ ಎಲ್ಲೆಡೆ ಅರಿವು ಮೂಡಿಸಲಾಗಿದೆ. ಆದರೂ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಪಿಒಪಿ ಗಣೇಶ ಮೂರ್ತಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಮೂರ್ತಿ ಸ್ಥಾಪಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಪಟ್ಟಣದಾದ್ಯಂತ ಸ್ಥಾಪಿಸಿರುವ ಮೂರ್ತಿಗಳನ್ನು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಆದರೆ ಗಣೇಶೋತ್ಸವ ಆಯೋಜಕರು ಪಿಒಪಿ ಮೂರ್ತಿ, ಮಣ್ಣಿನ ಗಣೇಶ ಮೂರ್ತಿ ಎಂದು ವಾದಿಸುತ್ತಿದ್ದಾರೆ. ಹೀಗಾಗಿ ಪರಿಶೀಲನೆ ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲಾಗಿದೆ. ಅವರು ಬಂದು ಪರಿಶೀಲಿಸಿ ಪಿಒಪಿ ಗಣೇಶವಲ್ಲ ಎಂದು ಖಚಿತಪಡಿಸಿದರೆ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗುವುದು ಇಲ್ಲದಿದ್ದರೆ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
Quote - ಪಟ್ಟಣದಲ್ಲಿ ಹಲವೆಡೆ ಕೂರಿಸಿರುವ ಗಣೇಶ ಮೂರ್ತಿಗಳು ಇರಬಹುದೆಂದು ಅನುಮಾನವಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪರಿಶೀಲನೆ ನಡೆಸಿ ಪಿಒಪಿ ಮೂರ್ತಿಗಳೆಂದು ದೃಢಿಪಡಿಸಿದರೆ ಆಯೋಜಕರ ವಿರುದ್ದ ಸೂಕ್ತ ಕ್ರಮವಹಿಸಲಾಗುವುದು ಸತ್ಯನಾರಾಯಣ ಪುರಸಭೆ ಮುಖ್ಯಾಧಿಕಾರಿ
ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ
ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿ ತಯಾರಿಕೆ ಮಾರಾಟ ಮತ್ತು ಪ್ರತಿಷ್ಠಾಪನೆ ನಿಷೇಧ.
ಬಣ್ಣ ಲೇಪಿತ ರಾಸಾಯನಿಕ ಮೂರ್ತಿಗಳನ್ನು ನದಿ ಕಾಲುವೆ ಬಾವಿ ಮತ್ತು ಕೆರೆಯಲ್ಲಿ ವಿಸರ್ಜಿಸಬಾರದು.
ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ ನಂತರ ಸಾಮೂಹಿಕವಾಗಿ ಗುರುತಿಸಿದ ಸ್ಥಳಗಳಲ್ಲಿ ವಿಸರ್ಜಿಸಬೇಕು.
ಹಸಿಕಸ (ಹೂವು ಹಣ್ಣು ಬಾಳೆ ಕಂಬ ಮಾವಿನ ತೋರಣ) ಮತ್ತು ಒಣಕಸವನ್ನು ಪ್ರತ್ಯೇಕಿಸ ವಿಲೇವಾರಿ ಮಾಡಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಪ್ಲಾಸ್ಟಿಕ್ ನಿಷೇಧಿಸಬೇಕು. ಜೇಡಿ ಮಣ್ಣು ಹರಿಶಿನ ಪುಡಿಯಿಂದ ತಯಾರಿಸಿದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಒತ್ತು ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.