ಮಂಗಳವಾರ, ಮೇ 17, 2022
26 °C
ಕೋವಿಡ್‌ ಸವಾಲು ಮೆಟ್ಟಿನಿಂತು ತೆರೆಮರೆಯಲ್ಲೇ ನಿಸ್ವಾರ್ಥ ಸೇವೆ

‘ಕೊರೊನಾ ಸೇನಾನಿ’ಗಳಿಗೆ ‘ಪ್ರಜಾವಾಣಿ’ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌ ಆತಂಕದಿಂದ ಇಡೀ ಜಗತ್ತು ತಲ್ಲಣಗೊಂಡಿತ್ತು. ದೇಶ ಲಾಕ್‌ಡೌನ್‌ನಿಂದ ಸ್ಥಬ್ಧಗೊಂಡಾಗ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸಮಾಜ ಸೇವಕರು ಸೇರಿದಂತೆ ಹಲವರು ಎಲೆಮರೆ ಕಾಯಿಯಂತೆ ಪರಿಸ್ಥಿತಿ ನಿಭಾಯಿಸಿದರು.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸೈನಿಕರಂತೆ ಮುಂದೆ ನಿಂತು ಕೆಲಸ ಮಾಡಿದ ಕೊರೊನಾ ಸೇನಾನಿಗಳ ಸೇವೆ ನಿಜಕ್ಕೂ ಅವಿಸ್ಮರಣೀಯ. ಜೀವದ ಹಂಗು ತೊರೆದು ಕೋವಿಡ್‌ ಕರ್ತವ್ಯದಲ್ಲೇ ಸಾರ್ಥಕತೆ ಕಂಡುಕೊಂಡ ಈ ಸೇನಾನಿಗಳ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು.

ಕೋವಿಡ್ ಸಂಕಷ್ಟದಲ್ಲಿ ಹಲವು ಸವಾಲು, ಕೊರತೆ ಹಾಗೂ ಆತಂಕ ಎದುರಾದವು. ಲಾಕ್‌ಡೌನ್‌, ಕ್ವಾರಂಟೈನ್‌, ಮನೆಯಿಂದ ಹೊರಬರಲಾರದ ಸ್ಥಿತಿ, ಆಸ್ಪತ್ರೆಯಲ್ಲಿ ಶುಶ್ರೂಷೆಗೆ ನಿಲ್ಲಲಾರದ, ಬಂಧು–ಬಾಂಧವರು ಮೃತಪಟ್ಟರೂ ಅಂತಿಮ ವಿಧಿವಿಧಾನ ಪೂರೈಸಲಾಗದ ಅಸಹಾಯಕತೆಯಲ್ಲಿ ಎಲ್ಲಾ ಸವಾಲು ಮೆಟ್ಟಿನಿಂತು ಕೆಲಸ ಮಾಡಿದ ಸೇನಾನಿಗಳಿವರು.

‘ಪ್ರಜಾವಾಣಿ’ಯು ಜಿಲ್ಲೆಯಲ್ಲಿ ಇಂತಹ ಸೇನಾನಿಗಳ ಪರಿಶ್ರಮ ಗುರುತಿಸಿ ಅಭಿನಂದಿಸಿತು. ಜಿಲ್ಲಾ ಕೇಂದ್ರದಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಈ ಸೇನಾನಿಗಳ ಪರ ಜಯಘೋಷ ಮೊಳಗಿತು. ಆರೋಗ್ಯ ಇಲಾಖೆ ಸಿಬ್ಬಂದಿಯು ಕರತಾಡನದ ಮೂಲಕ ಸೇನಾನಿಗಳ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು. ಅಲ್ಲದೇ, ‘ಪ್ರಜಾವಾಣಿ’ಯ ಕಾರ್ಯವೈಖರಿಯನ್ನು ಧನ್ಯತಾ ಭಾವದಿಂದ ಶ್ಲಾಘಿಸಿದರು. ನಾಡಿನ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಿಂದ ಗೌರವ ಸ್ವೀಕರಿಸಿದ್ದು, ಸೇನಾನಿಗಳ ಬದುಕಿನ ಸಾರ್ಥಕ ಕ್ಷಣವಾಗಿತ್ತು.

ಮನುಕುಲಕ್ಕೆ ಪಾಠ: ಕೊರೊನಾ ಸೇನಾನಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಜಿ.ನಾರಾಯಣಸ್ವಾಮಿ. ‘ಕೋವಿಡ್‌ ಸಂಕಷ್ಟ ಮತ್ತೆಂದು ಬರಬಾರದು. ಬಂಧುಗಳೇ ತೀರಿಕೊಂಡರೂ ಹತ್ತಿರಕ್ಕೆ ಹೋಗಿ ನೋಡಲಾಗದ, ಅಂತ್ಯಕ್ರಿಯೆ ಸಹ ನಡೆಸಲಾಗದ ಅಸಹಾಯಕ ಸ್ಥಿತಿಯು ಮನುಕುಲಕ್ಕೆ ದೊಡ್ಡ ಪಾಠ ಕಲಿಸಿದೆ’ ಎಂದು ಅಭಿಪ್ರಾಯಪಟ್ಟರು.

‘ಬಡವರು, ಸಿರಿವಂತರೆಂಬ ಭೇದ ಭಾವವಿಲ್ಲದೆ ಇಡೀ ಮನುಕುಲ ಕೋವಿಡ್‌ ವಿರುದ್ಧ ಮಂಡಿಯೂರಿತು. ಕಣ್ಣಿಗೆ ಕಾಣದ ಸಣ್ಣ ವೈರಾಣು ಹಣ, ಅಧಿಕಾರವಿದ್ದರೆ ಎಲ್ಲವನ್ನೂ ಜಯಿಸಬಹುದು ಎನ್ನುವವರಿಗೆ ಜೀವನದ ಸತ್ಯ ದರ್ಶನ ಮಾಡಿಸಿತು. ಕೋವಿಡ್‌ ದುರಿತಕಾಲದಲ್ಲಿ ಅಂತಃಕರಣದಿಂದ ಸ್ಪಂದಿಸಿದವರನ್ನು ಗುರುತಿಸಿರುವ ಪ್ರಜಾವಾಣಿಯ ಪ್ರಯತ್ನ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜಮುಖಿ ಕಾಳಜಿ: ‘ರಾಜ್ಯದಲ್ಲಿ 7 ದಶಕದಿಂದ ಮನೆ ಮಾತಾಗಿರುವ ಪ್ರಜಾವಾಣಿಯು ಕೊರೊನಾ ಸೇನಾನಿಗಳನ್ನು ಅಭಿನಂದಿಸಿರುವುದು ಪತ್ರಿಕೆಯ ಸಮಾಜಮುಖಿ ಕಾಳಜಿಯ ದ್ಯೂತಕ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ ಹೇಳಿದರು.

‘ಕೋವಿಡ್‌ ಕಾಲದಲ್ಲಿ ಜನ ಮನೆಯಿಂದ ಹೊರ ಹೋಗಲು ಭಯಪಡುತ್ತಿದ್ದ ಸಂದರ್ಭದಲ್ಲಿ ಕೊರೊನಾ ಸೇನಾನಿಗಳು ಪಟ್ಟ ಶ್ರಮ ಸಮಾಜಕ್ಕೆ ಮಾದರಿ. ನಾಡಿನ ಜನರ ಧ್ವನಿಯಾಗಿರುವ ಪ್ರಜಾವಾಣಿಯು ಕೊರೊನಾ ಸೇನಾನಿಗಳನ್ನು ಗೌರವಿಸುವ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಮೇಲ್ಪಂಕ್ತಿ ಹಾಕಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ಬಣ್ಣಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.