ಗುರುವಾರ , ಅಕ್ಟೋಬರ್ 21, 2021
24 °C
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದೇವಮಾನೆ ಮನವಿ

ಸಾಮಾಜಿಕ ಪಿಡುಗು ತಡೆಗೆ ಕೈಜೋಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಕಠಿಣ ಕಾನೂನು ಜಾರಿ ಮಾಡಿದ್ದು, ಇದರ ಅರಿವು ಪಡೆಯುವ ಮೂಲಕ ಸಾಮಾಜಿಕ ಪಿಡುಗುಗಳ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಪಿ.ದೇವಮಾನೆ ಕೋರಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಇಲ್ಲಿ ಸೋಮವಾರ ‘ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆ ಕಾಯ್ದೆ’ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್ ಸಂಕಷ್ಟದ ಸಮಯದಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂಬ ದೂರುಗಳಿವೆ. ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಪೈಶಾಚಿಕ ಮನಸ್ಸುಗಳಿಗೆ ಶಿಕ್ಷೆ ಆಗಬೇಕು. ದೌರ್ಜನ್ಯಕ್ಕೆ ಒಳಗಾದರೂ ದೂರು ನೀಡುವ ಶಕ್ತಿ ಇಲ್ಲದವರಿಗೆ ಕಾನೂನು ಪ್ರಾಧಿಕಾರ ಉಚಿತವಾಗಿ ಕಾನೂನು ನೆರವು ನೀಡಲಿದೆ’ ಎಂದು ತಿಳಿಸಿದರು.

‘ಸಮಾಜದಲ್ಲಿ ಜನರ ನಡುವೆ ಕೆಲಸ ಮಾಡುವ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಪಿಡಿಒಗಳು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ತಿಳಿಯಬೇಕು. ಮಕ್ಕಳಿಗೆ ಮಾರಕವಾಗುವ ಮೂಢನಂಬಿಕೆಗಳು, ಸಾಮಾಜಿಕವಾಗಿ ನಡೆಯುವ ದೌರ್ಜನ್ಯ,  ಮಹಿಳೆಯರ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆ ಕಾಯ್ದೆಯನ್ನು ಅರಿತು ಈ ಪಿಡುಗುಗಳ ತಡೆಗೆ ಶ್ರಮಿಸಬೇಕು’ ಎಂದರು.

‘ಪ್ರಾಧಿಕಾರದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಉಚಿತ ಕಾನೂನು ನೆರವು ಸಿಗಲಿದ್ದು, ಇದರ ಪ್ರಯೋಜನ ಪಡೆಯಿರಿ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಹೇಳಿದರು.

ಹೆಚ್ಚಿನ ಜವಾಬ್ದಾರಿ: ‘ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಇಲಾಖೆ ಹೆಚ್ಚಿನ ಜವಾಬ್ದಾರಿ ವಹಿಸಿದೆ. ದೌರ್ಜನ್ಯ ಪ್ರಕರಣಗಳನ್ನು ಕಂಡರೆ ಅಂಗನವಾಡಿ ಮೇಲ್ವಿಚಾರಕರು ದೂರು ನೀಡಿ ನೆರವಿಗೆ ನಿಲ್ಲಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ ಸಲಹೆ ನೀಡಿದರು.
‘ಇಲಾಖೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳಿವೆ. ಅಂಗನವಾಡಿಗಳ ಮೂಲಕ ಮಕ್ಕಳಿಗೆ, ಗರ್ಭಿಣಿಯರಿಗೆ ಅಪೌಷ್ಟಿಕತೆ ತಡೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ’ ಎಂದು ವಿವರಿಸಿದರು.

‘ಮಹಿಳೆಯರು ಅಥವಾ ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ನಡೆದ ಸಂದರ್ಭದಲ್ಲಿ ಮಾಧ್ಯಮಗಳು ಅವರ ಹೆಸರು, ವಿಳಾಸ, ವೈಯಕ್ತಿಕ ವಿವರ ಪ್ರಕಟಿಸುವಂತಿಲ್ಲ. ಇದರಿಂದ ಸಂತ್ರಸ್ತರ ಮೇಲೆ ಮಾನಸಿಕ ದೌರ್ಜನ್ಯ ಎಸಗಿದಂತಾಗುತ್ತದೆ’ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಚೌಡಪ್ಪ ಅಭಿಪ್ರಾಯಪಟ್ಟರು.

ವಕೀಲರಾದ ಕೆ.ಆರ್.ಧನರಾಜ್, ಕೆ.ಮಂಜುನಾಥ್, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಪಿಡಿಒಗಳು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.