ಕೋಲಾರ: ಮಂಡ್ಯ ಜಿಲ್ಲೆಯ ನಾಗಮಂಗಲ ನಗರದಲ್ಲಿ ಬುಧವಾರ ರಾತ್ರಿ ಗಣಪತಿ ವಿಸರ್ಜನೆಯ ಮೆರವಣಿಗೆ ಮೇಲೆ ದಾಳಿ ಖಡಿಸಿ ಗುರುವಾರ ಅಖಂಡ ಭಾರತ ವಿನಾಯಕ ಮಹಾಸಭಾ ಹಾಗೂ ಹಿಂದೂ ಸಂಘಟನೆಗಳು ನಗರದ ಪ್ರವಾಸಿ ಮಂದಿರ ಮುಂದೆ ಪ್ರತಿಭಟನೆ ನಡೆಸಿದವು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಕೋಮುಗಲಭೆ ನಡೆಯುತ್ತಿದೆ. ರಾಜ್ಯದಲ್ಲೂ ಉತ್ತರಪ್ರದೇಶದ ಮಾದರಿ ಸರ್ಕಾರ ರಚನೆಯಾಗಬೇಕು. ಮುಂದೆ ಇಂಥ ಕೃತ್ಯ ನಡೆಯದ ರೀತಿಯಲ್ಲಿ ಪುಂಡರಿಗೆ ಪಾಠ ಕಲಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಾದ್ಯಂತ ಮತಾಂಧ ಶಕ್ತಿಗಳ ಅಟ್ಟಹಾಸ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.
‘ಕೋಲಾರದಲ್ಲೂ ಇಂಥ ಘಟನೆಗಳು ನಡೆಯಬಹುದು. ಹಿಂದೂಗಳಾದ ನಾವು ಇದನ್ನು ಪ್ರಶ್ನೆ ಮಾಡಬೇಕು ಮತ್ತು ಖಂಡಿಸಬೇಕಾಗಿದೆ. ನಾಗಮಂಗಲ ಪ್ರಕರಣ ಸಂಬಂಧ ಕೂಡಲೇ ರಾಷ್ಟ್ರದ್ರೋಹಿ ಪ್ರಕರಣ ದಾಖಲಿಸಬೇಕು. ಗಲಭೆಗೆ ಕಾರಣರಾದವರನ್ನು ಈ ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.