ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ

ಸರ್ಕಾರದ ರೈತ ವಿರೋಧಿ ಧೋರಣೆ: ಧರಣಿ ನಿರತರ ಆಕ್ರೋಶ
Last Updated 29 ಮೇ 2020, 3:38 IST
ಅಕ್ಷರ ಗಾತ್ರ

ಕೋಲಾರ: ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಸದಸ್ಯರು ಇಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಪೊರೇಟ್‌ ಕಂಪನಿಗಳ ಹಿತರಕ್ಷಣೆಗಾಗಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ. ಇದರ ಭಾಗವಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದ ರೈತರು ಲಾಕ್‌ಡೌನ್‌, ಬೆಲೆ ಕುಸಿತ, ಬರ ಪರಿಸ್ಥಿತಿಯಿಂದ ತೊಂದರೆಗೆ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಸರ್ಕಾರದ ಅವೈಜ್ಞಾನಿಕ ನೀತಿಗೆ ರೈತರು ಬಲಿಪಶುವಾಗುತ್ತಿದ್ದಾರೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಆರೋಪಿಸಿದರು.

‘ಲಾಕ್‌ಡೌನ್‌ನಿಂದ ಕೃಷಿ ಬಿಕ್ಕಟ್ಟು ಎದುರಾಗಿದೆ. ರಾಜ್ಯದಲ್ಲಿ ಹಸಿವು, ನಿರುದ್ಯೋಗ, ಆರ್ಥಿಕ ದಿವಾಳಿತನ ತಾಂಡವವಾಡುತ್ತಿದೆ. ಸರ್ಕಾರ ಪರಿಸ್ಥಿತಿಯ ಲಾಭ ಪಡೆದು ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವಕ್ಕೆ ಕೊಟ್ಟಿದೆ. ಸ್ಪರ್ಧಾತ್ಮಕ ಬೆಲೆಯ ನೆಪದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತ ವಿರೋಧಿ ಕಾರ್ಪೊರೇಟ್‌ ಕಂಪನಿಗಳ ಪರವಾದ ನೀತಿ ಜಾರಿ ಮಾಡಿದೆ’ ಎಂದು ದೂರಿದರು.

ಎಪಿಎಂಸಿ ದುರ್ಬಲ: ‘ನಿಯಮದ ಪ್ರಕಾರ ದೇಶದಲ್ಲಿ ಪ್ರತಿ 5 ಕಿಲೋ ಮೀಟರ್‌ಗೆ ಒಂದು ಎಪಿಎಂಸಿ ಇರಬೇಕು. ಇದರಂತೆ 42 ಸಾವಿರ ಎಪಿಎಂಸಿ ಸ್ಥಾಪಿಸಬೇಕು. ಆದರೆ, ದೇಶದಲ್ಲಿ ಕೇವಲ 7 ಸಾವಿರ ಎಪಿಎಂಸಿಗಳಿವೆ. ಸರ್ಕಾರವು ವ್ಯವಸ್ಥಿತ ಮಾರುಕಟ್ಟೆ ಜಾಲ ಕಲ್ಪಿಸುವ ಬದಲು ಎಪಿಎಂಸಿ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹೊರಟಿದೆ’ ಎಂದು ರೈತ ಸಂಘ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಕಿಡಿಕಾರಿದರು.

‘ಕಂಪನಿಗಳು ಮನಸೋಇಚ್ಛೆ ಅಗತ್ಯ ವಸ್ತುಗಳ ದರಗಳನ್ನು ಏರುಪೇರು ಮಾಡಿ ಎಪಿಎಂಸಿಗಳಲ್ಲಿ ಏಕಸ್ವಾಮ್ಯ ಸಾಧಿಸುವ ಅಪಾಯವಿದೆ. ದೇಶದ ಆಹಾರ ಪದ್ಧತಿಯಲ್ಲಿ ಬದಲಾವಣೆಯಾಗಿ ಆಹಾರ ಭದ್ರತೆಗೆ ಧಕ್ಕೆ ಉಂಟಾಗಲಿದೆ’ ಎಂದು ಧರಣಿನಿರತರು ಆತಂಕ ವ್ಯಕ್ತಪಡಿಸಿದರು.

‘ಸರ್ಕಾರ ಕಾರ್ಪೊರೇಟ್‌ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತ ಕಾಯುವುದನ್ನು ಬಿಟ್ಟು ರೈತರ ಪರವಾಗಿ ವರ್ತಿಸಬೇಕು. ಎಪಿಎಂಸಿ ತಿದ್ದುಪಡಿ ಮಸೂದೆ ಜಾರಿ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಒತ್ತಾಯಿಸಿದರು.

ಕೆಪಿಆರ್‌ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎನ್.ಶ್ರೀರಾಮ್, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ರೈತ ಸಂಘ ಸದಸ್ಯರಾದ ಟಿ.ಕೃಷ್ಣೇಗೌಡ, ವೆಂಕಟೇಶ್‌, ಚಂದ್ರಪ್ಪ, ಗೋಪಾಲ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT