ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಭುಗಿಲೆದ್ದ ಆಕ್ರೋಶ; ಬೀದಿಗಿಳಿದು ಪ್ರತಿಭಟನೆ

ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ವಿರೋಧ
Last Updated 25 ಅಕ್ಟೋಬರ್ 2021, 15:17 IST
ಅಕ್ಷರ ಗಾತ್ರ

ಕೋಲಾರ: ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ ಸ್ಥಳಾಂತರ ನಿರ್ಧಾರದ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ವಿವಿಧ ಸಂಘಟನೆಗಳ ಸದಸ್ಯರು ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟದ (ಡಿವೈಎಫ್‌ಐ) ಸದಸ್ಯರು, ‘ಸರ್ಕಾರ ಕೆಜಿಎಫ್‌ ಎಸ್‌ಪಿ ಕಚೇರಿಯನ್ನು ವಿಜಯನಗರ ಜಿಲ್ಲೆಯೊಡನೆ ವಿಲೀನಗೊಳಿಸಲು ಹೊರಟಿದೆ. ಈ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಆಗ್ರಹಿಸಿದರು.

‘ಕೆಜಿಎಫ್‌ನಲ್ಲಿ ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ 150 ವರ್ಷಗಳ ಹಿಂದೆ ಸೃಷ್ಟಿಸಿದ ಪೊಲೀಸ್‌ ವರಿಷ್ಠಾಧಿಕಾರಿ ಹುದ್ದೆ ಹಾಗೂ ಕಚೇರಿಯನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು. ಕೆಜಿಎಫ್‌ಗೆ ಶೀಘ್ರವೇ ನೂತನ ಎಸ್‌ಪಿಯನ್ನು ನೇಮಿಸಬೇಕು ಮತ್ತು ಇಲ್ಲಿನ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯನ್ನು (ಡಿಎಆರ್‌) ನೂತನ ಜಿಲ್ಲೆ ವಿಜಯನಗರಕ್ಕೆ ಸ್ಥಳಾಂತರಿಸುವುದನ್ನು ತಡೆಯಬೇಕು’ ಎಂದು ಒಕ್ಕೂಟದ ಜಿಲ್ಲಾ ಘಟಕದ ಸಂಚಾಲಕ ವಿ.ಅಂಬರೀಶ್‌ ಒತ್ತಾಯಿಸಿದರು.

‘ಚಿನ್ನದ ಗಣಿ ಮುಚ್ಚಿದರೂ ಕಾರ್ಮಿಕರು ಕೆಜಿಎಫ್‌ನಲ್ಲೇ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಎಸ್‌ಪಿ ಕಚೇರಿಯನ್ನು ಹಿಂದಿನ ಎಲ್ಲಾ ಸರ್ಕಾರಗಳು ಉಳಿಸಿಕೊಂಡು ಪೊಲೀಸ್‌ ವ್ಯವಸ್ಥೆ ಬಲಪಡಿಸುತ್ತಾ ಬಂದಿವೆ. ರಾಜ್ಯದ ಗಡಿಯಲ್ಲಿರುವ ಕೆಜಿಎಫ್ ಸೂಕ್ಷ್ಮ ಪ್ರದೇಶವಾಗಿದ್ದು, ಚಿನ್ನದ ಗಣಿಗಾರಿಕೆ ಸಂದರ್ಭದಲ್ಲಿ ಸಾಕಷ್ಟು ಅಹಿತಕರ ಘಟನೆ ನಡೆದಿವೆ. ಕೆಜಿಎಫ್‌ ಜನರ ಸುರಕ್ಷತೆ ದೃಷ್ಟಿಯಿಂದ ಎಸ್ಪಿ ಕಚೇರಿ ಮುಂದುವರಿಸಬೇಕು’ ಎಂದು ಕೋರಿದರು.

ಒಕ್ಕೂಟದ ಕೆಜಿಎಫ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ದಿವಾಕರ್, ಕಾರ್ಯದರ್ಶಿ ಎ.ಆರ್‌.ನಿರೇಶ್‌ಬಾಬು, ಖಂಜಾಚಿ ಯು.ಎಸ್.ದಿನೇಶ್, ಉಪಾಧ್ಯಕ್ಷರಾದ ಕಣ್ಣನ್, ಪ್ರಸನ್ನ ಪಾಲ್ಗೊಂಡರು.

ಅರೆಬೆತ್ತಲೆ ಪ್ರತಿಭಟನೆ: ಕರ್ನಾಟಕ ದಲಿತ ಸಮಾಜ ಸೇನೆ ಕಾರ್ಯಕರ್ತರು ಜಿಲ್ಲಾ ಕೇಂದ್ರದ ಅಂಬೇಡ್ಕರ್‌ ವೃತ್ತದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.

‘ಸರ್ಕಾರ ಕೆಜಿಎಫ್‌ನಿಂದ ಎಸ್ಪಿ ಕಚೇರಿ ಮತ್ತು ಡಿಎಆರ್‌ ಸ್ಥಳಾಂತರಕ್ಕೆ ಮುಂದಾಗಿರುವುದು ಖಂಡನೀಯ. ಅತಿ ಸೂಕ್ಷ್ಮ ಪ್ರದೇಶವಾದ ಕೆಜಿಎಫ್‌ನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಿವೆ. ಎಸ್ಪಿ ಕಚೇರಿ ಸ್ಥಳಾಂತರವಾದರೆ ಕೆಜಿಎಫ್ ಮತ್ತು ಬಂಗಾರಪೇಟೆ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುತ್ತದೆ’ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎಸ್‌.ಆನಂದ್ ಆತಂಕ ವ್ಯಕ್ತಪಡಿಸಿದರು.

‘ಎಸ್‌ಪಿ ಕಚೇರಿ ಸ್ಥಳಾಂತರಿಸುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇವೆ. ಸರ್ಕಾರಕ್ಕೆ ಜನಪರ ಕಾಳಜಿಯಿದ್ದರೆ ತನ್ನ ನಿರ್ಧಾರದಿಂದ ಸರಿಯಬೇಕು. ಕೆಜಿಎಫ್‌ಗೆ ಶೀಘ್ರವೇ ಪೊಲೀಸ್‌ ವರಿಷ್ಠಾಧಿಕಾರಿಯನ್ನು ನಿಯೋಜಿಸಿ ಗೊಂದಲಗಳಿಗೆ ತೆರೆ ಎಳೆಯಬೇಕು. ಈ ನಿಟ್ಟಿನಲ್ಲಿ ಸಂಸದರು ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಸುರೇಶ್, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಸುರೇಶ್, ಮಂಜುನಾಥ್, ನಾಗಾರ್ಜುನ, ಸುಂದರ್, ಮುನಿಸ್ವಾಮಿ, ವೆಂಕಟೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT