ಕೋಲಾರ: ಸೋಮವಾರ (ಸೆ.2) ಕೋಲಾರ ನಗರದಲ್ಲಿ ನಡೆಯಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಾಲ್ಕನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಬೇಕಿದ್ದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಕೊನೆ ಗಳಿಗೆಯಲ್ಲಿ ತಮ್ಮ ಪ್ರವಾಸ ರದ್ದುಪಡಿಸಿದ್ದಾರೆ.
ಅನಿವಾರ್ಯ ಕಾರಣಗಳಿಂದ ಪ್ರವಾಸ ರದ್ದಾಗಿರುವ ವಿಚಾರವನ್ನು ರಾಜ್ಯಪಾಲರ ಕಚೇರಿ ಖಚಿತಪಡಿಸಿದೆ.
ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ಮುಂದುವರಿಯಲಿದೆ.
ರಾಜ್ಯಪಾಲರ ಪ್ರವಾಸ ರದ್ದತಿಗೆ ಈ ವಿಚಾರವೂ ಕಾರಣ ಎನ್ನಲಾಗಿದೆ.
ಅಲ್ಲದೇ, ಭಾನುವಾರ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಮುಖಂಡರು ಕೋಲಾರಕ್ಕೆ ಸೋಮವಾರ ಭೇಟಿ ನೀಡುತ್ತಿರುವ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆಯನ್ನೂ ನೀಡಿದ್ದರು.
ಈ ಎಲ್ಲಾ ಕಾರಣಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಪಾಲರ ಭೇಟಿ ರದ್ದಾಗಿದೆ.
ಸೋಮವಾರ ಬೆಳಿಗ್ಗೆ 11 ಗಂಟೆಗೆ ಕೋಲಾರ ನಗರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ಘಟಿಕೋತ್ಸವ ನಡೆಯಲಿದೆ.
'ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಮ ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಧ್ಯಕ್ಷತೆ ವಹಿಸಿ ಘಟಿಕೋತ್ಸವ ನಡೆಸಿಕೊಡಲಿದ್ದಾರೆ' ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ 'ಪ್ರಜಾವಾಣಿ'ಗೆ ತಿಳಿಸಿದರು.