ಸೋಮವಾರ, ಮಾರ್ಚ್ 1, 2021
17 °C
ನಿರ್ಮಿತಿ ಕೇಂದ್ರಕ್ಕೆ ಅಂಬೇಡ್ಕರ್‌ ಭವನದ ಕಾಮಗಾರಿ

ಡಿ.ಸಿ ಕಚೇರಿ ಎದುರು ಧರಣಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಅಂಬೇಡ್ಕರ್ ಭವನಗಳನ್ನು ದಲಿತ ಸಮುದಾಯದ ಗುತ್ತಿಗೆದಾರರಿಂದ ನಿರ್ಮಾಣ ಮಾಡಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಜ.27ರಂದು ಧರಣಿ ನಡೆಸುತ್ತೇವೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಎಚ್ಚರಿಕೆ ನೀಡಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವರ್ತೂರು ಪ್ರಕಾಶ್ ಅವರು ಶಾಸಕರಾಗಿದ್ದಾಗ ಸರ್ಕಾರ ತಾಲ್ಲೂಕಿಗೆ 79 ಅಂಬೇಡ್ಕರ್ ಭವನ ಮಂಜೂರು ಮಾಡಿತ್ತು. ಆದರೆ, ಕಾಮಗಾರಿ ನನೆಗುದಿಗೆ ಬಿದ್ದಿದ್ದರಿಂದ ಈಗ ಕೆಲಸ ಕೈಗೆತ್ತಿಕೊಳ್ಳಲಾಗಿದೆ’ ಎಂದರು.

‘ನಿರ್ಮಿತಿ ಕೇಂದ್ರದವರು ಸರಿಯಾಗಿ ಕೆಲಸ ಮಾಡುವುದಿಲ್ಲ. ಅವರ ಕಾಮಗಾರಿಯ ಗುಣಮಟ್ಟ ಕಳಪೆಯಾಗಿರುತ್ತದೆ. ನಿರ್ಮಿತಿ ಕೇಂದ್ರದ ನಿರ್ದೇಶಕ ನಾರಾಯಣಗೌಡರು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವುದಿಲ್ಲ. ಹೀಗಾಗಿ ನಿರ್ಮಿತಿ ಕೇಂದ್ರಕ್ಕೆ ಅಂಬೇಡ್ಕರ್‌ ಭವನಗಳ ಕಾಮಗಾರಿ ಕೊಡುವುದು ಸರಿಯಲ್ಲ’ ಎಂದು ಹೇಳಿದರು.

‘ಅಪರೂಪಕ್ಕೆ ಅಂಬೇಡ್ಕರ್ ಭವನಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಭವನಗಳು ಹೆಚ್ಚು ಕಾಲ ಉಳಿಯಬೇಕು. ಪ್ರತಿ ಘಟಕಕ್ಕೆ ಸರ್ಕಾರ ನೀಡಿರುವ ₹ 12 ಲಕ್ಷದ ಜತೆಗೆ ಗ್ರಾಮದ ಜನರು ಮತ್ತಷ್ಟು ಹಣ ಹಾಕಿ ಉತ್ತಮವಾಗಿ ಭವನ ನಿರ್ಮಿಸಿಕೊಳ್ಳಲು ಅವಕಾಶವಿದೆ. ಆದ ಕಾರಣ ದಲಿತ ಸಮುದಾಯದ ಗುತ್ತಿಗೆದಾರರಿಗೆ ಭವನದ ಕಾಮಗಾರಿ ನೀಡುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

‘ಭವನಗಳಿಗೆ ಬಿಡುಗಡೆಯಾಗಿರುವ ಅನುದಾನ ಸದ್ಬಳಕೆಯಾಗಬೇಕು. ನಿರ್ಮಿತಿ ಕೇಂದ್ರಕ್ಕೆ ನೀಡಿರುವ ಭವನಗಳ ಕಾಮಗಾರಿಯ ಗುತ್ತಿಗೆಯನ್ನು ಜಿಲ್ಲಾಧಿಕಾರಿಯು ಹಿಂಪಡೆಯಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಗುಡುಗಿದರು.

ಅಕ್ರಮ ಗಣಿಗಾರಿಕೆ: ‘ತಾಲ್ಲೂಕಿನ ಹಲವೆಡೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಗಣಿಗಾರಿಕೆ ಸ್ಥಳದಲ್ಲಿ ಜಿಲೆಟಿನ್‌ ಕಡ್ಡಿಗಳ ಸ್ಫೋಟಗಳು ದೊಡ್ಡ ಅನಾಹುತ ನಡೆದಿದೆ. ತಾಲ್ಲೂಕಿನ ಕ್ವಾರಿಗಳಲ್ಲೂ ಅಂತಹ ದುರ್ಘಟನೆ ನಡೆಯುವ ಸಾಧ್ಯತೆಯಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ತಾಲ್ಲೂಕಿನ ತಲಗುಂದ, ನರಸಾಪುರ ಸುತ್ತಮುತ್ತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ದೊಡ್ಡ ಶ್ರೀಮಂತರು ಪರವಾನಗಿ ಇಲ್ಲದೆ ಕ್ವಾರಿ ನಡೆಸುತ್ತಿದ್ದಾರೆ. ಸಂಸದ ಎಸ್.ಮುನಿಸ್ವಾಮಿ ಅವರು ಸಹ ಹಲವು ಬಾರಿ ಈ ಸಂಗತಿ ಪ್ರಸ್ತಾಪಿಸಿದ್ದಾರೆ. ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಈ ಅಕ್ರಮ ತಡೆಯಲು ವಿಫಲವಾಗಿದೆ’ ಎಂದು ಆರೋಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು