ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಗ್ಯಾಸ್‌ ಸಿಲಿಂಡರ್‌–ತರಕಾರಿ ಜತೆ ಪ್ರತಿಭಟನೆ

ತೈಲೋತ್ಪನ್ನ–ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ
Last Updated 27 ಫೆಬ್ರುವರಿ 2021, 16:33 IST
ಅಕ್ಷರ ಗಾತ್ರ

ಕೋಲಾರ: ತೈಲೋತ್ಪನ್ನಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಸದಸ್ಯರು ಇಲ್ಲಿ ಶನಿವಾರ ಗ್ಯಾಸ್‌ ಸಿಲಿಂಡರ್‌ ಮತ್ತು ತರಕಾರಿಗಳೊಂದಿಗೆ ಪ್ರತಿಭಟನೆ ಮಾಡಿದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರು ಗತಿಯಲ್ಲಿ ಸಾಗಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರವು ತೈಲೋತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ತೈಲೋತ್ಪನ್ನಗಳ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಮಾಡಲಾಗಿದೆ. ಸರ್ಕಾರಕ್ಕೆ ಜನಸಾಮಾನ್ಯರ ಆರ್ಥಿಕ ಸಂಕಷ್ಟದ ಅರಿವಿಲ್ಲ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಜಯದೇವಪ್ರಸನ್ನ ದೂರಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಕಡಿಮೆಯಿದ್ದರೂ ದೇಶದಲ್ಲಿ ತೈಲೋತ್ಪನ್ನಗಳ ಮೇಲಿನ ಸೆಸ್ ಕಡಿಮೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿಕೊಂಡೇ ಜೀವನ ನಡೆಸುತ್ತಿದ್ದಾರೆ. ಜನರ ದುಡಿಮೆಯ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಕೇಂದ್ರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಬಡ, ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುವಂತಾಗಿದೆ’ ಎಂದು ಹೇಳಿದರು.

ಕೈಗೊಂಬೆ: ‘ಪ್ರಧಾನಿ ಮೋದಿ ಜನಪರ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳ ಕೈಗೊಂಬೆಯಾಗಿರುವ ಅವರಿಗೆ ಜನಸಾಮಾನ್ಯರ ಕಷ್ಟದ ಅರಿವಿಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಸಣ್ಣ ವ್ಯಾಪಾರಿಗಳು ಹಾಗೂ ಉದ್ದಿಮೆದಾರರು ಬೀದಿ ಪಾಲಾಗಿದ್ದಾರೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ತೈಲೋತ್ಪನ್ನಗಳ ಬೆಲೆಗೆ ಅನುಗುಣವಾಗಿ ಬಸ್‌ ಪ್ರಯಾಣ ದರ ಹೆಚ್ಚಳವಾಗಿದೆ. ತೈಲ ಕಂಪನಿಗಳು ಬಡ ಜನರ ಹಣ ಲೂಟಿ ಮಾಡುತ್ತಿವೆ. ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ಜನ ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಗುಡುಗಿದರು.

ಬೀದಿಗಿಳಿದು ಹೋರಾಟ: ತೈಲೋತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸದಿದ್ದರೆ ದೇಶಕ್ಕೆ ಭವಿಷ್ಯದಲ್ಲಿ ಮತ್ತಷ್ಟು ಕಷ್ಟದ ದಿನಗಳು ಎದುರಾಗುತ್ತವೆ. ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದು ಬೆಲೆ ಏರಿಕೆ ನಿಯಂತ್ರಿಸಬೇಕು. ಇಲ್ಲದಿದ್ದರೆ ಜನ ಬೀದಿಗಿಳಿದು ಹೋರಾಟ ಮಾಡುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಜಯಪ್ರಕಾಶ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಜಾನ್ಸನ್, ಸದಸ್ಯರಾದ ಜಹೀರ್, ಮುನಿರಾಜು, ಅಸ್ಲಂ, ಇಜಾಜ್‌, ಸರಸ್ವತಿ, ಪಾಷಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT