ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರ ಜತೆ ಪ್ರತಿಭಟನೆ: ಎಚ್ಚರಿಕೆ

ಕೋಚಿಮುಲ್‌ನಲ್ಲಿ ಅಕ್ರಮ: ಕರ್ನಾಟಕ ರೈತ ಸೇನೆ ಅಧ್ಯಕ್ಷರ ಆರೋಪ
Last Updated 17 ಮಾರ್ಚ್ 2021, 15:34 IST
ಅಕ್ಷರ ಗಾತ್ರ

ಕೋಲಾರ: ‘ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹಾಗೂ ಮಾಲೂರು ತಾಲ್ಲೂಕು ಹಾಲು ಒಕ್ಕೂಟದ
ವ್ಯವಸ್ಥಾಪಕರ ದುರಾಡಳಿತ ಖಂಡಿಸಿ ಸಂಘಟನೆ ವತಿಯಿಂದ ಹಾಲು ಉತ್ಪಾದಕರೊಂದಿಗೆ ಪ್ರತಿಭಟನೆ ಮಾಡುತ್ತೇವೆ’ ಎಂದು ಕರ್ನಾಟಕ ರೈತ ಸೇನೆ ಅಧ್ಯಕ್ಷ ಎಂ.ಆರ್.ನಾರಾಯಣಗೌಡ ಎಚ್ಚರಿಕೆ ನೀಡಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ (ಕೋಚಿಮುಲ್‌) ಭಾರಿ ಅಕ್ರಮ ನಡೆದಿದ್ದು, ಈ ಬಗ್ಗೆ ಸರ್ಕಾರ ಉನ್ನತ ತನಿಖೆ ನಡೆಸಬೇಕು. ಹಾಲು ಒಕ್ಕೂಟ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮಾಲೂರು ತಾಲೂಕಿನಲ್ಲಿ ಕೋಚಿಮುಲ್‌ ಶಿಬಿರ ಕಚೇರಿಯನ್ನು ₹ 58 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಸೂರ್ಯ ಕ್ರಿಯೇಟರ್ಸ್‌ ಕಂಪನಿಗೆ ಟೆಂಡರ್‌ ನೀಡಲಾಗಿತ್ತು. ಶಿಬಿರ ಕಚೇರಿಯು 2 ಅಂತಸ್ತಿನ ಕಟ್ಟಡವಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ₹ 50 ಲಕ್ಷ ದೇಣಿಗೆ ಪಡೆದು ಈ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡಕ್ಕೆ ಬಿಡುಗಡೆಯಾಗಿದ್ದ ಅನುದಾನ ದುರ್ಬಳಕೆಯಾಗಿದೆ’ ಎಂದು ಆರೋಪಿಸಿದರು.

‘ಶಿಬಿರ ಕಚೇರಿಯ 4ನೇ ಅಂತಸ್ತನ್ನು ತಮ್ಮ ಸ್ವಂತ ಹಣದಲ್ಲಿ ನಿರ್ಮಿಸಿರುವುದಾಗಿ ನಂಜೇಗೌಡರು ನಾಮಫಲಕ ಹಾಕಿಸಿಕೊಂಡಿದ್ದಾರೆ. ಕಚೇರಿಯಲ್ಲಿನ ಪಾರ್ಟಿಶಿಯನ್‌ ಕೆಲಸಕ್ಕೆ ಟೆಂಡರ್ ಕರೆಯದೆ ತಮ್ಮ ಹಿಂಬಾಲಕರಿಗೆ ₹ 5 ಲಕ್ಷದ ಗುತ್ತಿಗೆ ನೀಡಿ ಸುಮಾರು ₹ 10 ಲಕ್ಷದ ಕಾಮಗಾರಿ ಮಾಡಿಸಿದ್ದಾರೆ. ಕೋಚಿಮುಲ್‌ ಹಣದಲ್ಲಿ ತಮ್ಮ ಕೊಠಡಿಯನ್ನು ಐಷಾರಾಮಿಯಾಗಿ ನಿರ್ಮಿಸಿಕೊಂಡಿದ್ದಾರೆ’ ಎಂದು ದೂರಿದರು.

‘ಶಿಬಿರ ಕಚೇರಿಯ ಪಕ್ಕದಲ್ಲಿ ₹ 35 ಲಕ್ಷ ವೆಚ್ಚದಲ್ಲಿ ಸಾರ್ವಜನಿಕರಿಗಾಗಿ ಉದ್ಯಾನ ನಿರ್ಮಿಸಿ ಹಾಲು ಉತ್ಪಾದಕರ ಹಣವನ್ನು ದುಂದು ವೆಚ್ಚ ಮಾಡಿದ್ದಾರೆ. ನಂಜೇಗೌಡರು ಶಿಬಿರ ಕಚೇರಿಯನ್ನು ಕಾಂಗ್ರೆಸ್ ಪಕ್ಷದ ಕಚೇರಿಯಾಗಿ ಮಾಡಿಕೊಂಡು ಸಭೆ ಸಮಾರಂಭ ನಡೆಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಸಂಘಟನೆ ಸದಸ್ಯರಾದ ಆನಂದ್, ಶ್ರೀಧರ್, ಮಂಜುನಾಥ್, ಸಿ.ವಿ.ಪ್ರಭಾಕರಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT