ಶುಕ್ರವಾರ, ಜುಲೈ 1, 2022
23 °C

ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ: ರಮೇಶ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನನ್ನ ನಿಲುವು ಒಪ್ಪಿಕೊಂಡಿದೆ. ನ್ಯಾಯಾಲಯ ನನ್ನ ಆದೇಶ ಎತ್ತಿ ಹಿಡಿದಿರುವುದಕ್ಕೆ ಖುಷಿಯಾಗಿದೆ’ ಎಂದು ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್‌ನ ಹಾಲಿ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಸಂತಸ ವ್ಯಕ್ತಪಡಿಸಿದರು.

ಶಾಸಕರ ಅನರ್ಹತೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಬುಧವಾರ ಪ್ರತಿಕ್ರಿಯೆ ನೀಡಿ, ‘ರಾಜೀನಾಮೆಯು ಯೋಗ್ಯ ವಿಚಾರ. ಆದರೆ, ಅನರ್ಹತೆಯು ಶಿಕ್ಷೆ. ನ್ಯಾಯಾಲಯದ ತೀರ್ಪನ್ನು 42 ವರ್ಷಗಳಿಂದ ನನ್ನನ್ನು ಕಾಪಾಡಿದ ಕ್ಷೇತ್ರದ ಜನರ ಪಾದಕ್ಕೆ ಅರ್ಪಿಸುತ್ತೇನೆ’ ಎಂದರು.

‘ಶಾಸಕರ ಅನರ್ಹತೆ ಒಪ್ಪಿಕೊಂಡ ನ್ಯಾಯಾಲಯ ತಪ್ಪಿಗೆ ಶಿಕ್ಷೆ ವಿಧಿಸದಿರುವುದು ಎಷ್ಟು ಸರಿ ಎಂಬ ಬಗ್ಗೆ ದೇಶದಲ್ಲಿ ಚರ್ಚೆಯಾಗಬೇಕು. ತೀರ್ಪಿನ ಬಗ್ಗೆ ಜನತಾ ನ್ಯಾಯಾಲಯ ತೀರ್ಮಾನ ಮಾಡಬೇಕು. ಅನರ್ಹ ಶಾಸಕರು ಈ ಸದನದ ಅವಧಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದೆಂಬ ನನ್ನ ವ್ಯಾಖ್ಯಾನವನ್ನು ನ್ಯಾಯಾಲಯ ಪರಿಗಣಿಸಿಲ್ಲ. ಆದರೂ ನ್ಯಾಯಾಲಯದ ಆದೇಶ ಗೌರವಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಅನರ್ಹತೆಯು ತಪ್ಪಿಗೆ ಕೊಡುವ ಶಿಕ್ಷೆ. ರಾಜೀನಾಮೆಯ ಅರ್ಥವೇ ಬೇರೆಯಿದೆ. ನ್ಯಾಯಾಲಯ ಯಾವ ಕಾರಣಕ್ಕೆ ಈ ರೀತಿ ತೀರ್ಪು ಕೊಟ್ಟಿದೆಯೋ ಗೊತ್ತಿಲ್ಲ. ರಾಜೀನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧಿಸುವುದು ಗೌರವಯುತ ನಡೆ. ಆದರೆ, ಅನರ್ಹ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸಿದರೆ ಏನು ಅರ್ಥ’ ಎಂದು ಬೇಸರ ವ್ಯಕ್ತಪಡಿಸಿದರು.

‘ತೀರ್ಪು ಮರು ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಕಾಂಗ್ರೆಸ್‌ ಆ ಬಗ್ಗೆ ತೀರ್ಮಾನ ಮಾಡುತ್ತದೆ. ಮೇಲ್ಮನವಿ ಸಲ್ಲಿಸುವಂತೆ ನಾನು ಪಕ್ಷಕ್ಕೆ ಸಲಹೆ ಕೊಡುವುದಿಲ್ಲ’ ಎಂದು ಹೇಳಿದರು.

ಸಿದ್ದರಾಮಯ್ಯ ಕರೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ರಮೇಶ್‌ಕುಮಾರ್ ಅವರಿಗೆ ಕರೆ ಮಾಡಿ ಮಾತನಾಡಿದರು. ಕರೆಗೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್‌, ‘ನಾಯಕರಿಗೆ ಗೌರವಪೂರ್ವಕ ನಮಸ್ಕಾರ. ನ್ಯಾಯಾಲಯದ ತೀರ್ಪಿನ ಕೀರ್ತಿ ತಮಗೂ ಸಲ್ಲಬೇಕು. ತಾವು ನನ್ನ ಮೇಲಿಟ್ಟಿರುವ ಮುಗ್ಧ ಪ್ರೀತಿಗೆ ಚಿರಋಣಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು