ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಇಪಿ ಖಂಡಿಸಿ ನಾಳೆ ಬೃಹತ್‌ ಹೋರಾಟ

ಪತ್ರಿಕಾಗೋಷ್ಠಿಯಲ್ಲಿ ಕೋಚಿಮುಲ್ ನಿರ್ದೇಶಕ ಹರೀಶ್ ಹೇಳಿಕೆ
Last Updated 2 ನವೆಂಬರ್ 2019, 14:04 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಆರ್‌ಸಿಇಪಿ) ಮಾಡಿಕೊಳ್ಳಲು ಮುಂದಾಗಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನ.4ರಂದು ನಗರದಲ್ಲಿ ಬೃಹತ್‌ ಹೋರಾಟ ನಡೆಸುತ್ತೇವೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರವು ಹೊರ ರಾಷ್ಟ್ರಗಳೊಂದಿಗೆ ಮಾಡಿಕೊಳ್ಳಲಿರುವ ಆರ್‌ಸಿಇಪಿ ಒಪ್ಪಂದವು ರೈತರ ಪಾಲಿಗೆ ಮರಣ ಶಾಸನವಾಗಿದೆ. ಇದನ್ನು ತಡೆಯದಿದ್ದರೆ ಬೀದಿ ಪಾಲಾಗಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೋಚಿಮುಲ್‌ನಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿ ಆರ್‌ಸಿಇಪಿ ಸಾಧಕ ಬಾಧಕದ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿದೆ. ಇದು ಕೇವಲ ಒಬ್ಬರ ಅಥವಾ ನಿರ್ದಿಷ್ಟ ಸಂಘಟನೆಯ ಹೋರಾಟವಲ್ಲ. ಬದಲಿಗೆ ಸಾಮೂಹಿಕ ಹೋರಾಟ’ ಎಂದು ತಿಳಿಸಿದರು.

‘ಕೋಚಿಮುಲ್‌ ವ್ಯಾಪ್ತಿಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಿನಕ್ಕೆ 10.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಅವಳಿ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದ್ದು, ರೈತರಿಗೆ ಕೃಷಿ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಬಹುಪಾಲು ರೈತರು ಉಪ ಕಸುಬಾಗಿ ಹೈನುಗಾರಿಕೆ ಅವಲಂಬಿಸಿದ್ದಾರೆ. ಆರ್‌ಸಿಇಪಿ ಒಪ್ಪಂದದ ಅನ್ವಯ ಕೇಂದ್ರವು ವಿದೇಶಿ ಹಾಲು ಹಾಗೂ ಹಾಲು ಉತ್ಪನ್ನಗಳನ್ನು ತೆರಿಗೆರಹಿತವಾಗಿ ಆಮದು ಮಾಡಿಕೊಳ್ಳಲು ಹೊರಟಿರುವುದು ದುರಂತ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಆಮದಾದರೆ ದೇಶದಲ್ಲಿ ಸ್ಥಳೀಯ ಹಾಲಿಗೆ ಬೇಡಿಕೆ ಇಲ್ಲವಾಗುತ್ತದೆ. ಇದು ಲಕ್ಷಾಂತರ ರೈತಾಪಿ ಕುಟುಂಬಗಳ ಅಳಿವು ಉಳಿವಿನ ಪ್ರಶ್ನೆ. ಹಾಲು ಉತ್ಪಾದಕರ ಸಂಘಗಳ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಹೋರಾಟದಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಆದ ಕಾರಣ ಜಿಲ್ಲಾಧಿಕಾರಿಯು ಹೋರಾಟದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರೆ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹೋಗುವುದಿಲ್ಲ’ ಎಂದು ವಿವರಿಸಿದರು.

ಹೊಸ ಒಪ್ಪಂದವಲ್ಲ: ‘ಆರ್‌ಸಿಇಪಿ ಹೊಸ ಒಪ್ಪಂದವಲ್ಲ. ಇದು 1991ರ ಗ್ಯಾಟ್ ಒಪ್ಪಂದದ ಭಾಗವಾಗಿದ್ದು, ಹಂತ ಹಂತವಾಗಿ ಜಾರಿಯಾಗುತ್ತಿದೆ. ಮನಮೋಹನ್‌ಸಿಂಗ್ ಅವರ ಆಡಳಿತದಲ್ಲೂ ಈ ಒಪ್ಪಂದವಿತ್ತು. ಆದರೆ, ಮೋದಿ ಆಡಳಿತದಲ್ಲಿ ಇದು ದುಪ್ಪಟ್ಟು ಆಗಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಶ್ರೀರಾಮ್ ಮಾಹಿತಿ ನೀಡಿದರು.

ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಕೆಪಿಆರ್‌ಎಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ, ಜನಾಧಿಕಾರ ಸಂಘಟನೆ ಸದಸ್ಯೆ ಮಂಜುಳಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT