ಶುಕ್ರವಾರ, ಮೇ 7, 2021
26 °C
ಕೋವಿಡ್‌ ನಿರ್ವಹಣೆ: ಡಿಸಿಎಂ ಅಶ್ವತ್ಥನಾರಾಯಣ ವಿಡಿಯೋ ಸಂವಾದ

ಸರ್ಕಾರದ ವಿರುದ್ಧ ಜನಪ್ರತಿನಿಧಿಗಳ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌ ನಿರ್ವಹಣೆ ವಿಚಾರವಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಂಗಳವಾರ ವಿಡಿಯೊ ಸಂವಾದದ ಮೂಲಕ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಶಾಸಕ.ಕೆ.ಆರ್.ರಮೇಶ್‌ಕುಮಾರ್, ‘ಅಧಿಕಾರಿಗಳು ಬಾಯಿ ಮಾತಿಗೆ ಬೇಡ್ ಖಾಲಿಯಿದೆ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ವಸ್ತುಸ್ಥಿತಿಗೆ ಅನುಗುಣವಾಗಿ ಮಾಹಿತಿ ನೀಡಬೇಕು. ಜನರ ಜೀವದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ’ ಎಂದು ಗುಡುಗಿದರು.

‘ಜಿಲ್ಲಾ ಕೇಂದ್ರದ ಎಸ್‍ಎನ್‍ಆರ್ ಆಸ್ಪತ್ರೆಯ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಆಸ್ಪತ್ರೆಯಲ್ಲಿರುವ ಸೋಂಕಿತರು ಅಲ್ಲಿನ ಅವ್ಯವಸ್ಥೆ ಬಗ್ಗೆ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಿಗೆ ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಮತ್ತು ವೈದ್ಯಕೀಯ ಆಮ್ಲಜನಕವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ವಸ್ತುಸ್ಥಿತಿ ಬೇರೆಯಿದೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ದೂರಿದರು.

‘ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಬಂಗಾರಪೇಟೆ ರೈಲ್ವೆ ಜಂಕ್ಷನ್‌ನಲ್ಲಿ ಹೊರ ರಾಜ್ಯಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯ ವರದಿ ಬರುವುದು ತಡವಾಗುತ್ತಿದ್ದು, ಅವರು ಊರೆಲ್ಲಾ ಓಡಾಡಿ ಸೋಂಕು ಹಬ್ಬಿಸುತ್ತಿದ್ದಾರೆ. ವೈದ್ಯರಿಗೆ ಎನ್‌–95 ಮಾಸ್ಕ್‌ ಇಲ್ಲ. ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಟೀಕಿಸಿದರು.

‘ಮಾಲೂರು ತಾಲ್ಲೂಕಿನಲ್ಲಿ ಇತ್ತೀಚೆಗೆ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರ ಪೈಕಿ ಬಹುತೇಕ ಮಂದಿಗೆ ವೈದ್ಯಕೀಯ ಆಮ್ಲಜನಕ ಬೇಕಾಗಿದೆ. ವೈದ್ಯರು ಹಾಗೂ ಅಧಿಕಾರಿಗಳು ಪರಸ್ಪರರತ್ತ ಬೆಟ್ಟು ಮಾಡುತ್ತಾ ಜವಾಬ್ದಾರಿಯಿಂದ ನುಣುಚಿಕೊಂಡು ಅಂತಿಮವಾಗಿ ಸೋಂಕಿತರು ಸಾಯುವಂತೆ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ವೈ.ನಂಜೇಗೌಡ ಕಿಡಿಕಾರಿದರು.

ಟೀಕೆ ಬೇಡ: ‘ವಿರೋಧ ಪಕ್ಷಗಳ ಟೀಕೆ ಸಹಜ. ಆದರೆ, ಕೋವಿಡ್‌ ಸಂಕಷ್ಟದಲ್ಲಿ ರಾಜಕೀಯ ಟೀಕೆ ಬೇಡ. ಕೊರೊನಾ ಸೋಂಕು ತಡೆಗೆ ಪ್ರತಿಯೊಬ್ಬರು ಸಹಕರಿಸಬೇಕು. ಪ್ರತಿ ಗ್ರಾಮ ಮಟ್ಟದಲ್ಲಿ ಜಾಗೃತಿ ಸಮಿತಿ ರಚಿಸಲಾಗಿದ್ದು, ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಮಾಹಿತಿ ನೀಡಿದರು.

‘ಜಿಲ್ಲೆಯ ಪರಿಸ್ಥಿತಿ ನೆನೆದರೆ ಆತಂಕವಾಗುತ್ತದೆ. ಸಚಿವರು ಬಂದು ಹೋದರು ಪರಿಸ್ಥಿತಿ ಸರಿ ಹೋಗಿಲ್ಲ. ಮೊದಲು ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಕಲ್ಪಿಸಲು ಕ್ರಮ ಕೈಗೊಳ್ಳಿ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮನವಿ ಮಾಡಿದರು.

‘ಅನಗತ್ಯ ಟೀಕೆ ಮಾಡಿಲ್ಲ. ಜನಪ್ರತಿನಿಧಿಗಳು ತಮಗೆ ಆಗುತ್ತಿರುವ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ವ್ಯವಸ್ಥೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಜನರ ಜೀವ ಉಳಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂಬುದು ಮುಖ್ಯ. ವೈದ್ಯರ ಕೊರೆತೆ ನಿರಂತರವಾಗಿ ಕಾಡುತ್ತಿದೆ. ಸರ್ಕಾರ ಶೀಘ್ರವೇ ವೈದ್ಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ವೈದ್ಯಕೀಯ ಸಿಬ್ಬಂದಿಯ ಬಾಕಿ ವೇತನ ಬಿಡುಗಡೆ ಮಾಡಬೇಕು’ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ನುರಿತ ತಜ್ಞರಿಲ್ಲ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಿವೆ. ಸಾಮಾನ್ಯವಾಗಿ ಶೇ 10ರಷ್ಟು ಸೋಂಕಿತರಿಗೆ ಮಾತ್ರ ವೈದ್ಯಕೀಯ ಆಮ್ಲಜನಕದ ಸಂಪರ್ಕವುಳ್ಳ ಬೆಡ್‌ನ ಅವಶ್ಯಕತೆಯಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಸಂಪರ್ಕವುಳ್ಳ 750 ಬೆಡ್‌ ಲಭ್ಯವಿದ್ದು, 100 ವೆಂಟಿಲೇಟರ್ ಕಾರ್ಯ ನಿರ್ವಹಿಸುತ್ತಿವೆ’ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ನಾರಾಯಣಸ್ವಾಮಿ, ‘ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇವೆ. ಆದರೆ, ಅವುಗಳ ನಿರ್ವಹಣೆಗೆ ನುರಿತ ತಜ್ಞರಿಲ್ಲ. ತಜ್ಞರನ್ನು ನೇಮಕ ಮಾಡಿಕೊಳ್ಳಲು ಎಷ್ಟು ಸಮಯ ಬೇಕು? ಎಂದು ಪ್ರಶ್ನಿಸಿದರು.

ಆಗ ಉಪ ಮುಖ್ಯಮಂತ್ರಿಗಳು, ‘ವೆಂಟಿಲೇಟರ್‌ ನಿರ್ವಹಣೆ ಸಂಬಂಧ ಕೆಲವರಿಗೆ ತರಬೇತಿ ಕೊಡಲು ಕ್ರಮ ಕೈಗೊಳ್ಳಲಾಗಿದೆ. ರೆಮ್‌ಡಿಸಿವರ್‌ ಚುಚ್ಚುಮದ್ದಿನ ಕೊರತೆಯಾಗದಂತೆ ಎಚ್ಚರ ವಹಿಸಿದ್ದೇವೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ತ್ವರಿತವಾಗಿ ಬೇಕಿರುವ ಎಲ್ಲಾ ಸೌರ್ಕಯ ಪಡೆದುಕೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದ್ದು, ಅನುದಾನ ಮಂಜೂರು ಮಾಡಿದ್ದೇವೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.