ಶನಿವಾರ, ನವೆಂಬರ್ 28, 2020
22 °C
ಚೆಕ್‌ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಅಭಿಪ್ರಾಯ

ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ: ಬೇಗನೆ ಇತ್ಯರ್ಥವಿಲ್ಲ- ಶಾಸಕ ಕೆ.ಶ್ರೀನಿವಾಸಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕೆಲ ಸೂಚನೆ ನೀಡಿದೆ. ಸರ್ಕಾರ ಆ ಸೂಚನೆ ಪ್ರಕಾರ ನಡೆದುಕೊಳ್ಳಬೇಕು. ನಮ್ಮ ಇಚ್ಛಾನುಸಾರ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಇಲ್ಲಿ ಶುಕ್ರವಾರ ಇಫ್ಕೋ ಟೋಕಿಯೊ ಸಂಸ್ಥೆ ವತಿಯಿಂದ 30 ಮಂದಿಗೆ ಆರ್ಥಿಕ ನೆರವಿನ ಚೆಕ್‌ ವಿತರಿಸಿ ಮಾತನಾಡಿ, ‘ಮೀಸಲಾತಿ ವಿಚಾರವಾಗಿ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು 10 ದಿನಗಳ ಕಾಲಾವಕಾಶವಿದೆ. ಹೀಗಾಗಿ ಈ ಪ್ರಕರಣ ಬೇಗನೆ ಇತ್ಯರ್ಥವಾಗುವುದು ಅನುಮಾನ. ಮುಂದೆ ಏನು ಆಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೇ’ ಎಂದರು.

‘ಪ್ರತಿ ವಾರ ತಾಲ್ಲೂಕು ಕಚೇರಿಯಲ್ಲಿ ನಡೆಯುವ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸೂಚಿಸುವ ಕೆಲಸಗಳನ್ನು ಅಧಿಕಾರಿಗಳು ನಿರ್ವಹಿಸದಿದ್ದರೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸು ಮಾಡಿ ಹಿರಿಯ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ನಾವು ಕಾಟಾಚಾರಕ್ಕೆ ಕುಂದು ಕೊರತೆ ಸಭೆ ನಡೆಸುತ್ತಿಲ್ಲ ಎಂದು ಎಚ್ಚರಿಕೆ ನೀಡಿದರು.

‘ಕೆಲ ಸಭೆಗಳ ವಿಚಾರ ಮಾಧ್ಯಮಗಳಲ್ಲಿ ಪ್ರಚಾರವಾಗುವುದರಿಂದ ಮುಂದಿನ ಕ್ರಮಕ್ಕೆ ಅಡ್ಡಿಯಾಗುತ್ತದೆ. ಈ ಕಾರಣಕ್ಕೆ ಮಾಧ್ಯಮದವರನ್ನು ಸಭೆಗೆ ಆಹ್ವಾನಿಸುವುದಿಲ್ಲ. ಪಾರದರ್ಶಕ ಆಡಳಿತ ನಮ್ಮ ಗುರಿ ಆಗಿದ್ದರೂ ಕೆಲವೊಮ್ಮೆ ಅನಿವಾರ್ಯ ಸಂದರ್ಭ ಎದುರಾಗುತ್ತವೆ. ಈ ಬಗ್ಗೆ ಜಿಲ್ಲಾಧಿಕಾರಿ ಸ್ವಷ್ಟನೆ ನೀಡುತ್ತಾರೆ’ ಎಂದರು.

‘ಸರ್ಕಾರಿ ಜಾಗದಲ್ಲಿ ಸ್ಮಶಾನ ನಿರ್ಮಿಸಿದ್ದರೆ ಅದನ್ನು ತೆರವು ಮಾಡಲು ಅವಕಾಶವಿಲ್ಲ. ಉಳಿಕೆ ಜಾಗ ಒತ್ತುವರಿಯಾಗಿದ್ದರೆ ಮಾತ್ರ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಸ್ವಾಧೀನಕ್ಕೆ ಪಡೆಯಬಹುದು’ ಎಂದು ಹೇಳಿದರು.

ವಿಸ್ತರಣೆ ಅತ್ಯಗತ್ಯ: ‘ಜಿಲ್ಲಾ ಕೇಂದ್ರದಲ್ಲಿ ಜನಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆಗಳ ಒತ್ತುವರಿ ತೆರವುಗೊಳಿಸಿ ವಿಸ್ತರಣೆ ಮಾಡುವುದು ಅತ್ಯಗತ್ಯ. ಈಗಾಗಲೇ ಚರ್ಚ್‌, ರಂಗಮಂದಿರ, ದೇವಾಲಯ, ಒಕ್ಕಲಿಗರ ಸಂಘದ ಕಟ್ಟಡಗಳು ಸೇರಿದಂತೆ ತಾರತಮ್ಯವಿಲ್ಲದೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘ರಸ್ತೆ ವಿಸ್ತರಣೆ ಮಾಡುತ್ತಿರುವುದು ಜನರ ಸುರಕ್ಷತೆಗೆ ಹೊರತು ಯಾರಿಗೂ ವೈಯಕ್ತಿಕ ಲಾಭವಿಲ್ಲ. ಸಾರ್ವಜನಿಕರು ಈ ಸಂಗತಿ ಅರಿತು ರಸ್ತೆ ವಿಸ್ತರಣೆಗೆ ಸಹಕರಿಸಿದರೆ ಮಾತ್ರ ನಗರದ ಅಭಿವೃದ್ಧಿ ಸಾಧ್ಯ. ನಗರದಲ್ಲಿ ವಾಹನ ದಟ್ಟಣೆಯ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವರ್ತುಲ ರಸ್ತೆ ನಿರ್ಮಿಸುವ ಸಂಬಂಧ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇವೆ’ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿರಾಜ್, ಮಾದಿಗ ದಂಡೋರ ಜಿಲ್ಲಾ ಸಮಿತಿ ಅಧ್ಯಕ್ಷ ವೆಂಕಟೇಶ್‌್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು