ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ ವಿರುದ್ಧ ತನಿಖೆಗೆ ನಿರ್ಣಯ

ನರಸಾಪುರ ಗ್ರಾಮ ಪಂಚಾಯಿತಿ: ಸಾಮಗ್ರಿ ಖರೀದಿಯಲ್ಲಿ ಅಕ್ರಮ
Last Updated 2 ಏಪ್ರಿಲ್ 2021, 11:19 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ನರಸಾಪುರ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಾಮಗ್ರಿ ಖರೀದಿಯಲ್ಲಿನ ಅಕ್ರಮದ ಸಂಬಂಧ ವಿಸ್ತೃತ ಚರ್ಚೆಯಾಗಿ ತನಿಖೆಗೆ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಅಕ್ರಮದ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ ಅಧ್ಯಕ್ಷೆ ಸುಮಿತ್ರಾ ಮತ್ತು ಉಪಾಧ್ಯಕ್ಷ ಸುಮನ್‌ ಚಂದ್ರು, ‘ಗ್ರಾ.ಪಂ ಚುನಾವಣೆಗೂ ಮುನ್ನ ಚುನಾಯಿತ ಸದಸ್ಯರು ಇರಲಿಲ್ಲ. ಆಗ ಗ್ರಾ.ಪಂಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿತ್ತು. ಆ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎಚ್‌.ಎಂ.ರವಿ ಅವರು ಸಾಮಗ್ರಿ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ’ ಎಂದು ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಎಸ್‌.ಮುನಿರಾಜು, ‘ಫೆ.26ರಂದು ಗ್ರಾ.ಪಂಗೆ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ಖರೀದಿಸಲಾಗಿದೆ. ಆದರೆ, ಆ ವಿವರವನ್ನು ಕಚೇರಿಯ ದಾಸ್ತಾನು ಕಡತದಲ್ಲಿ ನಮೂದಿಸಿಲ್ಲ. ಕರ ಸಂಗ್ರಹಗಾರ ನಾಗರಾಜ್‌ ಮತ್ತು ವಾಲ್‌ಮನ್‌ ಬಾಲಪ್ಪ ಅವರನ್ನು ವಿಚಾರಿಸಿದಾಗ ಕಚೇರಿಗೆ ಸಾಮಗ್ರಿಗಳು ಬಂದಿರುವುದಾಗಿ ಹೇಳಿದ್ದಾರೆ. ಆದರೆ, ಕಚೇರಿಯಲ್ಲಿ ಸಾಮಗ್ರಿಗಳಿಲ್ಲ. ಮತ್ತೊಂದೆಡೆ ಸಾಮಗ್ರಿ ಬಳಕೆ ಮಾಡಿಲ್ಲ’ ಎಂದು ದೂರಿದರು.

‘ಪಿಡಿಒ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಸಾಮಗ್ರಿ ಖರೀದಿಸಿದ್ದಾರೆ ಮತ್ತು ಬಿಲ್‌ನಲ್ಲೂ ಅವ್ಯವಹಾರ ನಡೆಸಿದ್ದಾರೆ. ಈ ಸಂಗತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಗ್ರ ತನಿಖೆ ಮಾಡಿಸಬೇಕು’ ಎಂದು ಒತ್ತಾಯಿಸಿದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಪಿಡಿಒ ರವಿ, ‘ಸಾಮಗ್ರಿ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಾಮಗ್ರಿ ಖರೀದಿಗೆ ಸಂಬಂಧಪಟ್ಟ ಬಿಲ್‌ ಮತ್ತು ವೋಚರ್‌ ಪ್ರತಿಯನ್ನು ಶೀಘ್ರವೇ ಸಲ್ಲಿಸುತ್ತೇವೆ’ ಎಂದು ಹೇಳಿದರು.

ಇದಕ್ಕೆ ಒಪ್ಪದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು 8 ಸದಸ್ಯರು ತನಿಖೆ ಆಗಲೇಬೇಕೆಂದು ಪಟ್ಟು ಹಿಡಿದರು. ಉಳಿದ 6 ಸದಸ್ಯರು ತನಿಖೆ ಬೇಡವೆಂದು ವಿರೋಧ ವ್ಯಕ್ತಪಡಿಸಿದರು. ಬಳಿಕ ಸದಸ್ಯರ ಸಂಖ್ಯಾ ಬಲದ ಆಧಾರದಲ್ಲಿ ತನಿಖೆ ಮಾಡಿಸುವ ನಿರ್ಣಯ ಕೈಗೊಳ್ಳಲಾಯಿತು.

ಕುಡಿಯುವ ನೀರಿನ ಸಮಸ್ಯೆ, ಕೊಳವೆ ಬಾವಿಗಳ ದುರಸ್ತಿ, ವಸತಿ ಯೋಜನೆ ಫಲಾನುಭವಿಗಳ ಆಯ್ಕೆ, ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ, ಚರಂಡಿ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಅವರನ್ನು ಸಭೆಗೆ ವೀಕ್ಷಕರನ್ನಾಗಿ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT