ಗುರುವಾರ , ನವೆಂಬರ್ 26, 2020
20 °C

ಕೋಲಾರ: ಕೊಳವೆ ಬಾವಿ ಕೊರೆಸಲು ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯ ಅಂತರ್ಜಲ ಪ್ರಾಧಿಕಾರವು 15 ಜಿಲ್ಲೆಗಳ 45 ತಾಲ್ಲೂಕುಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಕರ್ನಾಟಕ ಅಂತರ್ಜಲ (ಅಭಿವೃದ್ಧಿ, ನಿರ್ವಹಣೆ ಮತ್ತು ನಿಯಂತ್ರಣ) ನಿಯಮ–2011 ಹಾಗೂ 2012ರ ನಿಯಮಾವಳಿ ಅನುಸಾರ ಅಂತರ್ಜಲ ಅತಿ ಬಳಕೆ ತಾಲ್ಲೂಕುಗಳೆಂದು 45 ತಾಲ್ಲೂಕುಗಳನ್ನು ಗುರುತಿಸಲಾಗಿದೆ. ಈ ಪೈಕಿ ಕೋಲಾರ ಜಿಲ್ಲೆಯ ಆರೂ ತಾಲ್ಲೂಕುಗಳು ಸೇರಿವೆ ಎಂದು ಅಂತರ್ಜಲ ಇಲಾಖೆ ಹಿರಿಯ ಭೂವಿಜ್ಞಾನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹೊಸದಾಗಿ ಬಾವಿ ಅಥವಾ ಕೊಳವೆ ಬಾವಿ ಕೊರೆಸಲು ಜಿಲ್ಲಾ ಮಟ್ಟದ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅದೇ ರೀತಿ ಬಳಕೆದಾರರು ಕಡ್ಡಾಯವಾಗಿ ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ಕೊಳವೆ ಬಾವಿಗಳನ್ನು ನೋಂದಾಯಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಅನುಮತಿ ಪತ್ರ ಹೊಂದಿರದ ಯಾವುದೇ ವ್ಯಕ್ತಿಯು ಕೊಳವೆ ಬಾವಿ ಕೊರೆಯಲು ಹಣಕಾಸಿನ ಸಹಾಯ, ವಿದ್ಯುತ್‌ ಸಂಪರ್ಕ ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ. ಪ್ರಾಧಿಕಾರದ ಅನುಮತಿ ಪಡೆಯದೆ ಯಾವುದೇ ವ್ಯಕ್ತಿ, ರಿಗ್ ಯಂತ್ರದ ಮಾಲೀಕರು ಅಥವಾ ಏಜೆನ್ಸಿಯವರು ಪ್ರಾಧಿಕಾರದಲ್ಲಿ ನೋಂದಾಯಿಸದೆ ಬಾವಿ ಅಥವಾ ಕೊಳವೆ ಬಾವಿ ಕೊರೆದರೆ ನಿಯಮಾವಳಿಯ ಸೆಕ್ಷನ್‌ 32ರ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಕೆ ನೀಡಿದ್ದಾರೆ.

ಕೈಗಾರಿಕೆ, ವಾಣಿಜ್ಯ, ಮನೋರಂಜನೆ ಮತ್ತು ಇತರೆ ಉದ್ದೇಶಕ್ಕಾಗಿ ಕೊಳವೆ ಬಾವಿ ಕೊರೆಯಲು ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಕೊರೆದ ನಂತರ ಕೊಳವೆ ಬಾವಿಗಳನ್ನು ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು ಹಾಗೂ ಅಂತರ್ಜಲ ಬಳಸಲು ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು