ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅರ್ಧಕ್ಕೆ ನಿಂತ ಕಾಮಗಾರಿ: ಸಂಚಾರಕ್ಕೆ ಕಿರಿಕಿರಿ

ಜನ್ನಘಟ್ಟದಿಂದ–ಕಲ್ಲೂರು ಕ್ರಾಸ್‌ವರೆಗೆ ವಿಸ್ತರಣೆ: ಗುಂಡಿಮಯ ರಸ್ತೆಯಲ್ಲಿ ಸಾವಿನ ಪಯಣ
Last Updated 7 ಮಾರ್ಚ್ 2022, 20:30 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಜನ್ನಘಟ್ಟ ಗ್ರಾಮದ ರೈಲ್ವೆ ಕೆಳ ಸೇತುವೆಯಿಂದ ಕಲ್ಲೂರು ಕ್ರಾಸ್‌ವರೆಗಿನ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಗುಂಡಿಮಯ ರಸ್ತೆಯು ಸಾವಿನ ಹಾದಿಯಾಗಿದೆ.

ಕೋಲಾರ–ಶ್ರೀನಿವಾಸಪುರ ಮುಖ್ಯ ರಸ್ತೆಯಿಂದ ಜನ್ನಘಟ್ಟ, ಎಡಹಳ್ಳಿ, ಕಲ್ಲೂರು, ಗೌಡಹಳ್ಳಿ, ಬೊಮ್ಮಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನ ಸಂಚರಿಸುತ್ತವೆ. ಶಾಲಾ ವಾಹನಗಳು, ಕೃಷಿ ಉತ್ಪನ್ನ ಸಾಗಣೆ ವಾಹನಗಳು, ಆಂಬುಲೆನ್ಸ್‌, ಹಾಲು ಸಾಗಣೆ ವಾಹನಗಳು ಈ ರಸ್ತೆಯಲ್ಲೇ ಸಂಚರಿಸಬೇಕಿದ್ದು, ರಸ್ತೆ ಅವ್ಯವಸ್ಥೆಯಿಂದ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

ರೈಲ್ವೆ ಕೆಳ ಸೇತುವೆಯಿಂದ ಕಲ್ಲೂರು ಕ್ರಾಸ್‌ವರೆಗಿನ ಸುಮಾರು 2 ಕಿ.ಮೀ ರಸ್ತೆಯು ಸುಸ್ಥಿತಿಯಲ್ಲೇ ಇತ್ತು. ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯೂಡಿ) ಸೇರಿದ ಈ ರಸ್ತೆಯನ್ನು ವಿಸ್ತರಣೆಯ ಉದ್ದೇಶಕ್ಕಾಗಿ ಸಂಪೂರ್ಣ ಅಗೆಯಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಟೆಂಡರ್‌ ಪಡೆದು ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ರಸ್ತೆಯ ಡಾಂಬರು ಕಿತ್ತು, ಇಕ್ಕೆಲಗಳಲ್ಲಿ ಜಲ್ಲಿ ಸುರಿದಿದ್ದಾರೆ.

ಜನ್ನಘಟ್ಟ ಮತ್ತು ಕಲ್ಲೂರು ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇವೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಪ್ರೌಢ ಶಾಲೆಗೆ ಸುಗಟೂರು, ಅರಿನಾಗನಹಳ್ಳಿ, ಮುದುವಾಡಿ ಅಥವಾ ದೂರದ ತಾಲ್ಲೂಕು ಕೇಂದ್ರಕ್ಕೆ ಬರಬೇಕಿದೆ. ಜನ್ನಘಟ್ಟ, ಕಲ್ಲೂರು, ಎಡಹಳ್ಳಿ, ಗೌಡಹಳ್ಳಿ, ಬೊಮ್ಮಸಂದ್ರಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ ಸೌಕರ್ಯವಿಲ್ಲ. ಆರ್ಥಿಕ ಸ್ಥಿತಿವಂತರು ಸ್ವಂತ ಅಥವಾ ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸುತ್ತಾರೆ.

ಆದರೆ, ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಸೈಕಲ್‌ಗಳಲ್ಲಿ ಶಾಲೆಗೆ ಹೋಗಿ ಬರುವ ಪರಿಸ್ಥಿತಿ ಇದೆ. ಸೈಕಲ್ ಇಲ್ಲದ ಮಕ್ಕಳು ಪ್ರತಿನಿತ್ಯ ನಾಲ್ಕೈದು ಕಿ.ಮೀ ನಡೆದೇ ಸುಗಟೂರಿನ ಶಾಲೆಗೆ ಹೋಗಿ ಬರುತ್ತಾರೆ. ಇದೀಗ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಸೈಕಲ್‌ನಲ್ಲಿ ಶಾಲೆಗೆ ಹೋಗುವುದು ಮಕ್ಕಳಿಗೆ ನಿಜಕ್ಕೂ ದೊಡ್ಡ ಸವಾಲಾಗಿದೆ.

ಚಾಲಕರ ಹಿಂದೇಟು: ರಸ್ತೆ ದುಸ್ಥಿತಿಯಿಂದ ಆಗಾಗ್ಗೆ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿವೆ. ಗುಂಡಿಗಳಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ ಬೈಕ್‌ ಸವಾರರಿಗೆ ಲೆಕ್ಕವಿಲ್ಲ.

ರಸ್ತೆ ಅವ್ಯವಸ್ಥೆಯ ಕಾರಣಕ್ಕೆ ಆಟೊ ಸೇರಿದಂತೆ ಖಾಸಗಿ ವಾಹನಗಳ ಚಾಲಕರು ಈ ಮಾರ್ಗಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಗುಂಡಿಮಯ ರಸ್ತೆಯಲ್ಲಿ ಹೆಚ್ಚಿನ ಇಂಧನ ವ್ಯಯವಾಗುತ್ತದೆ ಹಾಗೂ ವಾಹನಗಳು ಪದೇಪದೇ ರಿಪೇರಿಗೆ ಬರುತ್ತವೆ ಎಂಬ ಕಾರಣಕ್ಕೆ ಈ ರಸ್ತೆಗೆ ಆಟೊ ಚಾಲಕರು ಬರುವುದಿಲ್ಲ. ಕೆಲ ಆಟೊ ಚಾಲಕರು ಬಂದರೂ ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆಯುತ್ತಾರೆ.

ದೂಳಿನ ಮಜ್ಜನ: ಗುಂಡಿಮಯ ರಸ್ತೆಯಲ್ಲಿ ವಾಹನಗಳು ನಿಧಾನ ಗತಿಯಲ್ಲಿ ಸಾಗುವ ದೃಶ್ಯ ಸಾಮಾನ್ಯವಾಗಿದೆ. ರಸ್ತೆಗಳಲ್ಲಿ ದೊಡ್ಡ ವಾಹನಗಳು ಸಂಚರಿಸಿದರೆ ಹಿಂಬದಿಯ ವಾಹನ ಸವಾರರಿಗೆ ಹಾಗೂ ದಾರಿ ಹೋಕರಿಗೆ ದೂಳಿನ ಮಜ್ಜನವಾಗುತ್ತದೆ.

ರಸ್ತೆಗೆ ಹೊಂದಿಕೊಂಡಂತೆ ಎರಡೂ ಬದಿಯಲ್ಲಿ ಕೃಷಿ ಜಮೀನುಗಳಿದ್ದು, ದೂಳಿನಿಂದ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಶೀಘ್ರವೇ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಗ್ರಾಮಸ್ಥರು, ಜನ್ನಘಟ್ಟ ಗ್ರಾಮ ಪಂಚಾಯಿತಿ ಸದಸ್ಯರು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಗುತ್ತಿಗೆದಾರರತ್ತ ಬೊಟ್ಟು ಮಾಡುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT