ಸೋಮವಾರ, ಮಾರ್ಚ್ 8, 2021
31 °C

ಪೌರ ಕಾರ್ಮಿಕರು 3ನೇ ದರ್ಜೆ ಪ್ರಜೆಗಳಲ್ಲ: ನಗರಸಭೆ ಸದಸ್ಯ ಮುಬಾರಕ್‌ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಪೌರ ಕಾರ್ಮಿಕರನ್ನು ಸಮಾಜ ಮೂರನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿದೆ’ ಎಂದು ನಗರಸಭಾ ಸದಸ್ಯ ಬಿ.ಎಂ.ಮುಬಾರಕ್‌ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಭಾನುವಾರ ನಗರಸಭೆ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗೆ ದಿನಸಿ ಮತ್ತು ಬಟ್ಟೆ ವಿತರಿಸಿ ಮಾತನಾಡಿ, ‘ಇಡೀ ಜಗತ್ತು ಇಂದು ಕೊರೊನಾ ಸೋಂಕಿನ ಮುಂದೆ ಮಂಡಿಯೂರಿ ಕುಳಿತಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲೂ ಪೌರ ಕಾರ್ಮಿಕರು ಜೀವದ ಹಂಗು ತೊರೆದು ಹಗಲಿರುಳು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ’ ಎಂದು ಸ್ಮರಿಸಿದರು.

‘ಪೌರ ಕಾರ್ಮಿಕರು ಕುಟುಂಬ ಸದಸ್ಯರಿಂದ ದೂರವಾಗಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಪೌರ ಕಾರ್ಮಿಕರಲ್ಲಿ ಶೇ 90ರಷ್ಟು ಮಂದಿ ನಾನಾ ಕಾಯಿಲೆಗೆ ತುತ್ತಾಗಿ ಸೇವಾವಧಿ ಪೂರ್ಣಗೊಳ್ಳುವ ಮುನ್ನವೇ ಮೃತಪಡುತ್ತಿದ್ದಾರೆ. ಶೇ 10ರಷ್ಟು ಮಂದಿ ಮಾತ್ರ ಸೇವಾವಧಿ ಪೂರ್ಣಗೊಳಿಸಿ ಪಿಂಚಣಿ ಪಡೆಯುತ್ತಾರೆ’ ಎಂದು ಹೇಳಿದರು.

‘ಗುತ್ತಿಗೆ ಪೌರ ಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ಸಿಗುತ್ತಿಲ್ಲ. ಸರ್ಕಾರದಿಂದ ಬಿಲ್‌ ಪಡೆಯುವ ಗುತ್ತಿಗೆದಾರರು ಪೌರ ಕಾರ್ಮಿಕರಿಗೆ ಸಂಬಳ ನೀಡದೆ ಶೋಷಿಸುತ್ತಿದ್ದಾರೆ. ಪೌರ ಕಾರ್ಮಿಕರ ಪರಿಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಹಗಲು ರಾತ್ರಿ ಸೇನಾನಿಗಳಂತೆ ಕೆಲಸ ಮಾಡುವ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು’ ಎಂದು ಮನವಿ ಮಾಡಿದರು.

ಪ್ರತ್ಯೇಕ ಬಜೆಟ್‌: ‘ದೇಶದಲ್ಲಿ ಕೃಷಿ, ಶಿಕ್ಷಣ, ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಅನುದಾನ ಮೀಸಲಿಡಲಾಗುತ್ತಿದೆ. ಅದೇ ರೀತಿ ಪೌರ ಕಾರ್ಮಿಕರ ಕಲ್ಯಾಣಕ್ಕೆ ಪ್ರತ್ಯೇಕ ಬಜೆಟ್ ರೂಪಿಸಬೇಕು. ಪೌರ ಕಾರ್ಮಿಕರು ಸಹ ಮನುಷ್ಯರೇ. ಜನರು ಅವರನ್ನು ಸಮಾಜದ ಅವಿಭಾಜ್ಯ ಅಂಗವೆಂದು ಪರಿಗಣಿಸಬೇಕು. ಪೌರ ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಬೇಕು’ ಎಂದು ಕಿವಿಮಾತು ಹೇಳಿದರು.

ಪರಿಣಾಮಕಾರಿ ಕೆಲಸ: ‘ಕೋಲಾರ ಜಿಲ್ಲೆಯು ದೇಶದಲ್ಲಿ ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಪೊಲೀಸ್‌ ಇಲಾಖೆಯು ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡಿದೆ. ಜಿಲ್ಲಾಡಳಿತವು ಕೊರೊನಾ ಸೋಂಕಿನ ತಡೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದರಿಂದ ಜಿಲ್ಲೆಯು ಹಸಿರು ವಲಯದಲ್ಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪೌರ ಕಾರ್ಮಿಕರು ಹಾಗೂ ನಗರಸಭೆ ಸಿಬ್ಬಂದಿಯು ಆರ್ಥಿಕವಾಗಿ ಅಶಕ್ತರೆಂದು ಭಾವಿಸಿ ಆಹಾರ ಪದಾರ್ಥ ವಿತರಿಸುತ್ತಿಲ್ಲ. ಕೊರೊನಾ ಸೋಂಕಿನ ತಡೆಗೆ ಶ್ರಮಿಸುತ್ತಿರುವ ಅವರ ನಿಸ್ವಾರ್ಥ ಸೇವೆ ಗುರುತಿಸಿ ಪ್ರೇರೇಪಿಸಲು ಆಹಾರದ ಕಿಟ್‌ ವಿತರಣೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ನಗರಸಭೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಸೇರಿದಂತೆ 323 ಮಂದಿಗೆ ಬಟ್ಟೆ ಹಾಗೂ ದಿನಸಿ ವಿತರಿಸಲಾಯಿತು. ತಾಲ್ಲೂಕು ಪಂಚಾಯಿತಿ ಸದಸ್ಯ ಮುದುವಾಡಿ ಮಂಜು, ನಗರಸಭೆ ಮಾಜಿ ಸದಸ್ಯ ರಮೇಶ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು