ಕೋಲಾರ: ಕೋವಿಡ್ ಕಾರಣಕ್ಕೆ ಸುಮಾರು ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ 1ರಿಂದ 5ರವರೆಗಿನ ತರಗತಿಗಳು ಸೋಮವಾರ ಪುನರಾರಂಭವಾದವು.
ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ತರಗತಿಗಳನ್ನು ಆರಂಭಿಸಿದ್ದು, ಮಕ್ಕಳು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಲೆಗಳನ್ನು ತಳಿರು ತೋರಣ, ರಂಗೋಲಿಯಿಂದ ಸಿಂಗರಿಸಿ, ವಿದ್ಯಾರ್ಥಿಗಳನ್ನು ಪ್ರವೇಶ ದ್ವಾರದಲ್ಲೇ ಶಿಕ್ಷಕರು ಸ್ವಾಗತಿಸಿದರು.
ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಹಬ್ಬದ ಸಂಭ್ರಮ ಕಂಡುಬಂದಿತು. ಶಿಕ್ಷಕರು ಮಕ್ಕಳಿಗೆ ಸಿಹಿ ತಿನಿಸು, ಲೇಖನಿ ಸಾಮಗ್ರಿ, ಹೂವು ನೀಡಿ ಆತ್ಮಿಯವಾಗಿ ಬರ ಮಾಡಿಕೊಂಡರು. ಶಾಲಾ ಆವರಣ ಮತ್ತು ತರಗತಿಗಳಲ್ಲಿ ಕೋವಿಡ್ ಸುರಕ್ಷತಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಶಿಕ್ಷಕರು ತರಗತಿಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸರದಿ ಸಾಲಿನಲ್ಲಿ ಬಂದ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್ ನೀಡಲಾಯಿತು. ಶಾಲೆಗಳ ಪ್ರತಿ ಕೊಠಡಿಯನ್ನು ಬೆಳಿಗ್ಗೆಯೇ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಯಿತು. ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಶಾಲೆಗೆ ಬಂದಿದ್ದರು. ವಿದ್ಯಾರ್ಥಿಗಳಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ತರಗತಿಗಳಲ್ಲಿ ಮೇಜುಗಳ ವ್ಯವಸ್ಥೆ ಮಾಡಲಾಗಿತ್ತು.ದೀರ್ಘ ಕಾಲದ ಬಳಿಕ ತರಗತಿಗಳು ಆರಂಭವಾಗಿದ್ದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂತಿ. ಮೊದಲ ದಿನವಾದ ಕಾರಣ ಹೆಚ್ಚಿನ ಕಡೆ ತರಗತಿಗಳು ನಡೆಯಲಿಲ್ಲ.
ಶೇ 82ರಷ್ಟು ಹಾಜರಾತಿ: ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಸೇರಿದಂತೆ 1,209 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೆ ಮೊದಲ ದಿನ 1,10,533 ವಿದ್ಯಾರ್ಥಿಗಳಲ್ಲಿ 88,137 (ಶೇ 82) ಮಂದಿ ಹಾಜರಾದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ಹಾಗೂ ಅಧಿಕಾರಿಗಳು ಹಲವು ಶಾಲೆಗಳಿಗೆ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದರು.
‘ಕೋವಿಡ್ ಮಾರ್ಗಸೂಚಿ ಪಾಲನೆಯಲ್ಲಿ ಲೋಪ ಆಗಬಾರದು. ನ.2ರವರೆಗೂ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ತರಗತಿ ನಡೆಸಬೇಕು. ಈ ಮಕ್ಕಳಿಗೆ ಸದ್ಯ ಬಿಸಿಯೂಟ ನೀಡಬಾರದು. ಶಾಲೆಗೆ ಬರುವ ಮಕ್ಕಳ ಪೋಷಕರಿಂದ ಕಡ್ಡಾಯವಾಗಿ ಒಪ್ಪಿಗೆ ಪತ್ರ ಪಡೆಯಿರಿ. ಪೋಷಕರು 2 ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ’ ಎಂದು ಡಿಡಿಪಿಐ ನಾಗೇಶ್ ಶಿಕ್ಷಕರಿಗೆ ಸೂಚಿಸಿದರು.
‘ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಿ. ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚು ನಿಗಾ ವಹಿಸಿ. ಇದಕ್ಕೆ ಪ್ರತ್ಯೇಕ ತಂಡ ರಚಿಸಿ. ತಾಲ್ಲೂಕುವಾರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿಗಳ ನೇತೃತ್ವದ ತಂಡಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿವೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.