ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ ಸೀತಾಫಲ!

ನೈಸರ್ಗಿಕವಾಗಿ ಮಾಗಿದ ಸ್ವಾದಿಷ್ಟ ಹಣ್ಣಿಗೆ ಭಾರಿ ಬೇಡಿಕೆ
Last Updated 20 ಸೆಪ್ಟೆಂಬರ್ 2022, 3:07 IST
ಅಕ್ಷರ ಗಾತ್ರ

ಮುಳಬಾಗಿಲು: ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುವ ಸೀತಾಫಲ ನಿರುದ್ಯೋಗಿಗಳಿಗೆ ಅರೆಕಾಲಿಕ ಉದ್ಯೋಗ ಒದಗಿಸಿದೆ.

ಸೀತಾಫಲ ಋತು ಆರಂಭವಾಗಿದ್ದು ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ ಈ ಮೂರು ತಿಂಗಳು ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ನೀಡುತ್ತದೆ. ದೀಪಾವಳಿ ಹಬ್ಬದ ವರೆಗೂ ಸೀತಾಫಲ ಸೀಜನ್ ಇರುತ್ತದೆ. ನಿರಾತಂಕವಾಗಿ ಹೊಟ್ಟೆ ಹೊರೆಯಲು ದಾರಿ ಕಲ್ಪಿಸುತ್ತದೆ. ನಿರುದ್ಯೋಗಿಗಳು, ಬಡವರು, ಮಕ್ಕಳು, ವಯಸ್ಸಾದವರು, ಕೂಲಿ ಕಾರ್ಮಿಕರು ಸೀತಾಫಲ ವ್ಯಾಪಾರದಲ್ಲಿ ತೊಡಗುತ್ತಾರೆ.

ಮುಳಬಾಗಿಲು ತಾಲ್ಲೂಕು ಹೆಚ್ಚು ಗುಡ್ಡಗಾಡು ಪ್ರದೇಶಗಳನ್ನು ಹೊಂದಿದೆ. ಹಾಗಾಗಿ ಸೀತಾಫಲ ಹಣ್ಣು ಹೇರಳವಾಗಿ ದೊರೆಯುತ್ತವೆ. ತಾಲ್ಲೂಕಿನ ದುಗ್ಗಸಂದ್ರ ಹೋಬಳಿ ಕುರುಡುಮಲೆ ಗ್ರಾಮದ ಬೆಟ್ಟದ ತಪ್ಪಲು, ಗುಡ್ಡಗಾಡು ಮತ್ತು ಸರ್ಕಾರಿ ಖರಾಬು ಪ್ರದೇಶದಲ್ಲಿಪ್ರಕೃತಿದತ್ತವಾಗಿ ನೂರಾರು ಸೀತಾಫಲ ಗಿಡಗಳು ಬೆಳೆದಿವೆ.

ಸೆಪ್ಟೆಂಬರ್‌ ಆರಂಭವಾದರೆ ಸಾಕು ಜನರು ಗುಡ್ಡಗಾಡು ಪ್ರದೇಶಗಳಿಗೆ ಲಗ್ಗೆ ಇಡುತ್ತಾರೆ. ಹಣ್ಣು ಕಿತ್ತು ತಂದು ಹೆದ್ದಾರಿಗಳು ಮತ್ತು ರಸ್ತೆ ಬದಿಗಳಲ್ಲಿ ಮಾರಾಟ ಮಾಡುತ್ತಾರೆ.ಒಂದು ಕೆ.ಜಿ ಸೀತಾಫಲ ₹50ರಿಂದ ₹100 ವರೆಗೂ ಮಾರಾಟ ಆಗುತ್ತವೆ. ಯಾವುದೇ ರಾಸಾಯನಿಕಗಳಿಲ್ಲದೆ ನೈಸರ್ಗಿಕವಾಗಿ ಬೆಳೆದ ಹಣ್ಣು ಚಳಿಗಾಲದಲ್ಲಿ ಗಿಡದಲ್ಲಿಯೇ ಮಾಗಿರುತ್ತವೆ.

‘ಸ್ವಾದಿಷ್ಟ ಹಣ್ಣುಗಳನ್ನು ಸಂಗ್ರಹಿಸಲು ಹಾಕುವ ಶ್ರಮವೊಂದೇ ಇಲ್ಲಿ ಬಂಡವಾಳ. ನಿತ್ಯ ₹500 – ₹1,000 ವರೆಗೂ ವ್ಯಾಪಾರ ಆಗುತ್ತದೆ. ಇದು ನಮ್ಮ ಬದುಕಿನ ಬಂಡಿ ಸಾಗಿಸಲು ಸಹಕಾರಿಯಾಗಿದೆ’ ಎನ್ನುತ್ತಾರೆ ಸೀತಾಫಲ ವ್ಯಾಪಾರಿಗಳು.

ರೈತರು ಈಗೀಗ ಸೀತಾಫಲವನ್ನು ತೋಟಗಳಲ್ಲಿ ಬೆಳೆಯಲು ಮುಂದಾಗುತ್ತಿದ್ದಾರೆ. ಸೀತಾಫಲ ನಾಟಿ ಮಾಡಿದ ಮೂರು ವರ್ಷಕ್ಕೆ ಫಸಲು ನೀಡಲು ಆರಂಭವಾಗುತ್ತದೆ. ಗಿಡಗಳು ಸುಮಾರು ಇಪ್ಪತ್ತು ವರ್ಷ ಫಸಲು ಕೊಡುತ್ತದೆ. ಎಕರೆಗೆ ಸುಮಾರು ಮೂರು ಲಕ್ಷ ಹಣ ಸಂಪಾದಿಸಬಹುದು. ಅಂತರ ಬೆಳೆಯಾಗಿಯೂ ಇದನ್ನು ಬೆಳೆಸಬಹುದು ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು.

ಔಷಧಿ ಗುಣ ಸೀತಾಫಲದಲ್ಲಿ ಕಬ್ಬಿಣ,ರಂಜಕದಅಂಶ, ವಿಟಮಿನ್‌ಎ, ಸಿ, ಬಿ-6, ಬಿ-3, ಮ್ಯಾಗ್ನೇಷಿಯಂ, ಫೈಬರ್ ಅಂಶ ಅಧಿಕವಾಗಿರುತ್ತದೆ. ಈ ಮರದ ಎಲೆಯನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಸೀತಾಫಲ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ. ಚರ್ಮದ ಕಾಂತಿ ಹೆಚ್ಚಾಗುತ್ತದೆ ಎನ್ನುತ್ತಾರೆ ವೈದ್ಯ ನಾರಾಯಣಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT