ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರಮ್ಮ ಕೆರೆಗೆ ಕೊಳಚೆ ನೀರು

Published 6 ಜನವರಿ 2024, 6:43 IST
Last Updated 6 ಜನವರಿ 2024, 6:43 IST
ಅಕ್ಷರ ಗಾತ್ರ

ಕೋಲಾರ: ನಗರದ ಕೊಳಚೆ ನೀರನ್ನು ಸಂಸ್ಕರಿಸದೆ ಐತಿಹಾಸಿಕ ಕೋಲಾರಮ್ಮ (ಅಮಾನಿಕೆರೆ) ಕೆರೆಗೆ ಹರಿಸುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಗರಸಭೆ ಆಯುಕ್ತರಿಗೆ ಈಚೆಗೆ ನೋಟಿಸ್‌ ನೀಡಿದೆ.

ಮಳೆ ನೀರು ಹರಿಯುವ ಕಾಲುವೆಗಳಲ್ಲಿ ನಗರದ ವಿವಿಧೆಡೆಯ ತ್ಯಾಜ್ಯ ನೀರು ಹರಿದು ಕೋಲಾರಮ್ಮ ಕೆರೆಯ ಒಡಲು ಸೇರುತ್ತಿದೆ. ಇದರಿಂದ ಕೆರೆ ಕಲುಷಿತಗೊಳ್ಳುತ್ತಿದ್ದು, ಜಲಚರಗಳಿಗೂ ತೊಂದರೆ ಉಂಟಾಗುತ್ತಿದೆ.

ಕೊಳಚೆ ನೀರನ್ನು ಕೆರೆಗಳಿಗೆ ಶುದ್ಧೀಕರಿಸಿ ಹರಿಸಬೇಕು. ಆದರೆ, ಹಲವಾರು ವರ್ಷಗಳಿಂದ ಕೋಲಾರಮ್ಮ ಕೆರೆಯ ಒಡಲಿಗೆ ಐದಾರು ಕಡೆಯಿಂದ ನಗರದ ತ್ಯಾಜ್ಯ ನೀರು ಸೇರುತ್ತಿದೆ. ಅಕ್ಟೋಬರ್‌ನಲ್ಲಿ ಗಾಂಧಿನಗರದ ಸೇತುವೆ ಬಳಿ ವಿಷಕಾರಿ ನೊರೆ ಕಾಣಿಸಿಕೊಂಡಿತ್ತು. ಮಳೆ ಬಂದಾಗ ಕೆರೆಯಿಂದ ನೀರು ಉಕ್ಕಿ ಕೋಡಿಯಲ್ಲಿ ನೊರೆ ಧುಮ್ಮಿಕ್ಕಿತ್ತು.

ಈ ಕೆರೆಗೆ ಹಲವು ವರ್ಷಗಳಿಂದ ಕೆ.ಸಿ.ವ್ಯಾಲಿ ನೀರು ಹರಿಯುತ್ತಿದೆ. ಮಳೆ ನೀರು ಕೆರೆಗೆ ಸೇರಿ ಮಾಲಿನ್ಯಕಾರಕ ಅಂಶಗಳು ಕದಡಿ ನೊರೆ ಸೃಷ್ಟಿಯಾಗುತ್ತಿದೆ‌. ಅಂತರಗಂಗೆ ಬೆಟ್ಟದಿಂದ ರಾಜಕಾಲುವೆಯಲ್ಲಿ ಹರಿದು ಬರುವ ನೀರಿನ ಜೊತೆಗೆ ನಗರದ ವಿವಿಧೆಡೆಯ ಕೊಳಚೆ ನೀರು ಈ ಕೆರೆ ಸೇರುತ್ತಿದೆ.

‘ಕೇವಲ ಎರಡು ಹಂತಗಳಲ್ಲಿ ಶುದ್ಧೀಕರಿಸಿ ಕೆ.ಸಿ.ವ್ಯಾಲಿ ನೀರನ್ನು ಈ ಕೆರೆಗೆ ಹರಿಸುತ್ತಿರುವುದು, ಎಗ್ಗಿಲ್ಲದೆ ಕೊಳಚೆ ನೀರು ಸೇರುತ್ತಿರುವುದು, ಸರ್ಕಾರ, ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದಿಂದ ಕೆರೆ ಹಾಳಾಗುತ್ತಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ನಗರದಿಂದ ಹರಿಯುತ್ತಿರುವ ಕೊಳಚೆ ನೀರಿನಿಂದ ಕೆರೆ ಕಲುಷಿತಗೊಂಡಿದೆ. ಹೀಗಾಗಿ, ನೊರೆ ಬರುತ್ತದೆ. ಕೆ.ಸಿ.ವ್ಯಾಲಿ ನೀರಿನಿಂದ ಅಲ್ಲ’ ಎಂದು ಎಂಬುದಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಥನೆ.

ಜಿಲ್ಲಾಡಳಿತವು ಕೆರೆ ಸೌಂದರ್ಯ ಕರಣಗೊಳಿಸಲು ಸಿಎಸ್‌ಆರ್‌ ಅನುದಾನದಡಿ ಈಚೆಗೆ ಕಾಮಗಾರಿ ಕೈಗೆತ್ತಿಕೊಂಡಿದೆ.

ಇನ್ಫೊಸಿಸ್‌ ನೀಡಿರುವ ₹ 20 ಕೋಟಿ ನಿಧಿಯಲ್ಲಿ ಕೋಲಾರಮ್ಮ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಅದರಲ್ಲಿ ಕೆರೆಗೆ ನೀರು ಶುದ್ಧೀಕರಿಸಿ ಬಿಡುವ ಯೋಜನೆಯೂ ಇದೆ. ಬಂಡ್‌ ನಿರ್ಮಾಣ ಮಾಡಿ ಜಾಗೃತಿ ವಹಿಸಲಾಗುತ್ತಿದೆ ಎಂಬುದು ಕೋಲಾರ ನಗರಸಭೆ ಅಧಿಕಾರಿಗಳ ಹೇಳಿಕೆ.

ಕೋಲಾರದ ನಗರಸಭೆ ಮಾತ್ರವಲ್ಲ; ಬಂಗಾರಪೇಟೆ, ಕೆಜಿಎಫ್‌, ಮಾಲೂರು ಸೇರಿದಂತೆ ಎಲ್ಲಾ ನಗರಸಭೆ, ಪುರಸಭೆಯ ಆಯುಕ್ತರು, ಪೌರಾಯುಕ್ತರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ನಗರ, ಪಟ್ಟಣ ಸುತ್ತಲಿನ ಕೆರೆಗಳಿಗೆ ಕೊಳಚೆ ನೀರನ್ನು ಶುದ್ಧೀಕರಿಸಿ ಹರಿಸುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಗೂ ಪತ್ರ ರವಾನಿಸಿದ್ದಾರೆ.

ಈಗಾಗಲೇ ಎಲ್ಲೆಂದರಲ್ಲಿ ನಗರಸಭೆಯಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬಗ್ಗೆಯೂ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿದೆ.

ಕೋಲಾರ ನಗರದಲ್ಲಿ ಕಾಲುವೆ ಮೂಲಕ ಕೋಲಾರಮ್ಮ ಕೆರೆಗೆ ಹರಿಯುತ್ತಿರುವ ಕೊಳಚೆ ನೀರು

ಕೋಲಾರ ನಗರದಲ್ಲಿ ಕಾಲುವೆ ಮೂಲಕ ಕೋಲಾರಮ್ಮ ಕೆರೆಗೆ ಹರಿಯುತ್ತಿರುವ ಕೊಳಚೆ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT