ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬನ್ನಿ

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್ ಸಲಹೆ
Last Updated 9 ಅಕ್ಟೋಬರ್ 2021, 15:25 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕುಗಳಿದ್ದು, ಈ ಬಗ್ಗೆ ಅರಿವು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರ ಲೈಂಗಿಕ ಅಲ್ಪಸಂಖ್ಯಾತರಿಗೆ ಕಾನೂನಾತ್ಮಕವಾಗಿ ಹಲವು ಹಕ್ಕು ನೀಡಿದೆ. ಉದ್ಯೋಗದಲ್ಲಿ ಮೀಸಲಾತಿ ನೀಡಿದೆ. ಲೈಂಗಿಕ ಅಲ್ಪಸಂಖ್ಯಾತರು ಬದುಕಲು ಅಗತ್ಯವಾದ ಪಡಿತರ ಚೀಟಿ, ಆಧಾರ್‌ಕಾರ್ಡ್‌ ಪಡೆದುಕೊಳ್ಳಿ. ಮತದಾರರಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ’ ಎಂದು ಸೂಚಿಸಿದರು.

‘ಲೈಂಗಿಕ ಅಲ್ಪಸಂಖ್ಯಾತರಿಗೆ ಅನುಕಂಪದ ಅಗತ್ಯವಿಲ್ಲ. ಅವರನ್ನು ಸಮಾಜ ಸಮಾನತೆಯಿಂದ ಕಾಣಬೇಕು. ಈ ನಿಟ್ಟಿನಲ್ಲಿ ಅವರಿಗಾಗಿ ಕಾನೂನು ರೂಪಿಸಿದ್ದು, ಇದರ ಪ್ರಯೋಜನ ಪಡೆಯಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಹೇಳಿದರು.

‘ಕಾನೂನು ಪ್ರಾಧಿಕಾರವು ಸಂಕಷ್ಟಕ್ಕೆ ಒಳಗಾದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಕಾನೂನು ನೆರವು ನೀಡಲಿದೆ. ಲೈಂಗಿಕ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವುದು ಕಾನೂನು ರೀತಿಯಲ್ಲಿ ಅಪರಾಧ. ಅವರು ಸಹ ಮನುಷ್ಯರೇ ಆಗಿದ್ದು, ಅವರನ್ನು ಗೌರವದಿಂದ ಕಾಣಬೇಕು. ಅವರು ಬದುಕಲು ಸರ್ಕಾರದ ಇಲಾಖೆಗಳು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದರು.

ಉನ್ನತ ಹುದ್ದೆ: ‘ಎಲ್ಲರಂತೆ ಸಮಾನತೆಯ ಜೀವನ ನಡೆಸಲು ಸರ್ಕಾರ ಲೈಂಗಿಕ ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳನ್ನು ನೀಡಿದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಸಮಾಜದ ಉನ್ನತ ಹುದ್ದೆ ಅಲಂಕರಿಸಿ ಬದುಕು ರೂಪಿಸಿಕೊಂಡಿದ್ದಾರೆ’ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎನ್.ಅನುಪಮಾ ಮೆಚ್ಚುಗೆ ವ್ಯಕ್ತಪಡಿಸಿದರು.

‘ಭಿಕ್ಷಾಟನೆ ಬೇಡ. ಸಮಾಜದಲ್ಲಿ ಬದುಕಲು ವಿವಿಧ ಯೋಜನೆಗಳಿವೆ. ಸರ್ಕಾರ ಸ್ವಾವಲಂಬಿ ಬದುಕು ನಡೆಸಲು ಸಾಲ ಸೌಲಭ್ಯ, ಉದ್ಯಮ ಸ್ಥಾಪನೆಗೆ ಅವಕಾಶ ನೀಡುತ್ತಿದೆ. ಇದರ ಪ್ರಯೋಜನ ಪಡೆಯಿರಿ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್ ಕಿವಿಮಾತು ಹೇಳಿದರು.

ಗಮನ ಮಹಿಳಾ ಸಮೂಹದ ಸಂಘಟಕಿ ಶಾಂತಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT