ಮಂಗಳವಾರ, ಸೆಪ್ಟೆಂಬರ್ 17, 2019
27 °C

ಷೇರು ನಷ್ಟ: ಟೆಕ್ಕಿ ಆತ್ಮಹತ್ಯೆ

Published:
Updated:

ಕೋಲಾರ: ಬೆಂಗಳೂರಿನ ಮಾರತ್‌ಹಳ್ಳಿ ನಿವಾಸಿ ಪ್ರಶಾಂತ್ (42) ಎಂಬುವರು ತಾಲ್ಲೂಕಿನ ಚುಂಚದೇನಹಳ್ಳಿ ಗೇಟ್‌ನ ಪ್ರಯಾಣಿಕರ ತಂಗುದಾಣದಲ್ಲಿ ಶನಿವಾರ ರಾತ್ರಿ ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಬಿಹಾರದ ಪ್ರಶಾಂತ್‌ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದರು. ಪತ್ನಿ ದೀಪಾ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಅವರಿಗೆ ತಿಂಗಳಿಗೆ ₹ 2.70 ಲಕ್ಷ ಸಂಬಳವಿತ್ತು. ದೀಪಾ ಸಹ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಅವರಿಗೆ ತಿಂಗಳಿಗೆ ₹ 1.50 ಲಕ್ಷ ಸಂಬಳವಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಷೇರು ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದ್ದ ಪ್ರಶಾಂತ್‌ ಸಾಕಷ್ಟು ನಷ್ಟ ಅನುಭವಿಸಿ ಸುಮಾರು ₹ 70 ಲಕ್ಷ ಸಾಲ ಮಾಡಿದ್ದರು. ಷೇರು ವ್ಯವಹಾರದಲ್ಲಿನ ನಷ್ಟ ಹಾಗೂ ಸಾಲದ ಒತ್ತಡದಿಂದ ಬೇಸರಗೊಂಡಿದ್ದ ಅವರು ಬೈಕ್‌ನಲ್ಲಿ ರಾತ್ರಿ ಚುಂಚದೇನಹಳ್ಳಿ ಗೇಟ್‌ನ ಪ್ರಯಾಣಿಕರ ತಂಗುದಾಣಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಸ್ತೂಲ್‌ನಿಂದ ತಲೆಗೆ ಒಂದು ಸುತ್ತು ಗುಂಡು ಹಾರಿಸಿಕೊಂಡಿರುವ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಷೇರು ವ್ಯವಹಾರದಲ್ಲಿನ ನಷ್ಟ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ’ ಎಂದು ಪ್ರಶಾಂತ್‌ ಪತ್ರ ಬರೆದಿಟ್ಟಿದ್ದಾರೆ. ಆ ಪತ್ರ ಅವರ ಪ್ಯಾಂಟ್‌ನ ಜೇಬಿನಲ್ಲಿ ಪತ್ತೆಯಾಗಿದೆ. ಅವರಿಗೆ ಪಿಸ್ತೂಲ್‌ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Post Comments (+)