ಸೋಮವಾರ, ಆಗಸ್ಟ್ 15, 2022
24 °C

ಕುರಿ ಸಾಕಾಣಿಕೆ ಲಾಭದಾಯಕ ವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಜೀವನದಲ್ಲಿ ಗೆಲುವು ಖಚಿತ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುರಿ ಸಾಕಾಣಿಕೆ ತರಬೇತಿ ಶಿಬಿರದಲ್ಲಿ ಮಾತನಾಡಿ, ‘ಪ್ರತಿ ವೃತ್ತಿಯು ಪ್ರಾಮಾಣಿಕತೆ ಅಪೇಕ್ಷಿಸುತ್ತದೆ. ಧರ್ಮದ ದಾರಿಯಲ್ಲಿ ನಡೆಯುವವರನ್ನು ದೇವರು ಕೈ ಹಿಡಿಯುತ್ತಾನೆ. ಅಸತ್ಯ, ಅಪ್ರಾಮಾಣಿಕ ದಾರಿಯಲ್ಲಿ ಹೋಗುವವರಿಗೆ ಕಾಲವೇ ಸೂಕ್ತ ಉತ್ತರ ನೀಡುತ್ತದೆ’ ಎಂದರು.

‘ಕುರಿ ಸಾಕಾಣಿಕೆಯು ಲಾಭದಾಯಕ ವೃತ್ತಿ ಆಗಿರುವುದರಿಂದ ಎಲ್ಲರಿಗೂ ಭವಿಷ್ಯವಿದೆ. ಆದರೆ, ವೈಜ್ಞಾನಿಕವಾಗಿ ಕುರಿ ಸಾಕಾಣಿಕೆ ಮಾಡಬೇಕು. ಆಗ ಮಾತ್ರ ಈ ವೃತ್ತಿಯಲ್ಲಿ ಬೆಳೆಯಲು ಸಾಧ್ಯ. ಜೀವನದಲ್ಲಿ ಹಂತ ಹಂತವಾಗಿ ಮೇಲೇರಬೇಕು. ಅಡ್ಡ ದಾರಿ ಹಿಡಿದು ಬೇಗ ಶ್ರೀಮಂತರಾಗಲು ಹೊರಟೆ ಕಷ್ಟ ತಪ್ಪಿದ್ದಲ್ಲ’ ಎಂದು ಹೇಳಿದರು.

‘ಪ್ರಾಮಾಣಿಕವಾಗಿ ಮಾಡುವ ಎಲ್ಲಾ ವೃತ್ತಿಗಳು ಶ್ರೇಷ್ಠ. ಕೆಲಸದಲ್ಲಿ ಮೇಲು, ಕೀಳು ಎಂಬುದಿಲ್ಲ. ಸ್ವಉದ್ಯೋಗವು ಎಲ್ಲಾ ಉದ್ಯೋಗಗಳಿಗಿಂತ ಶ್ರೇಷ್ಠ. ಹತ್ತಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಅವಕಾಶ ಸ್ವಉದ್ಯೋಗದಲ್ಲಿ ಮಾತ್ರ ಸಿಗುತ್ತದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ವಲಯ) ದೇವರಾಜ್ ಅಭಿಪ್ರಾಯಪಟ್ಟರು.

ಆರ್ಥಿಕ ನೆರವು: ‘ಸ್ವಉದ್ಯೋಗ ಮಾಡುವವರಿಗೆ ಕೆನರಾ ಬ್ಯಾಂಕ್ ಎಲ್ಲಾ ರೀತಿಯ ಆರ್ಥಿಕ ನೆರವು ನೀಡಲು ಸಿದ್ಧವಿದೆ. ಕೃಷಿ ಪ್ರಧಾನ ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮವು ರೈತರ ಜೀವನಾಡಿಯಾಗಿದೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರಿಗೆ ಬ್ಯಾಂಕ್‌ನಿಂದ ಸಾಲ ನೀಡುತ್ತೇವೆ’ ಎಂದು ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅಂಬಾಜಿ ತುಲಜಾರಾಮ್ ನವಲೆ ತಿಳಿಸಿದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧೀಕ್ಷಕ ವಿಶ್ವನಾಥ್, ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ರಮಾಕಾಂತ್ ಬಿ.ಯಾದವ್, ತರಬೇತುದಾರರಾದ ಕೆ.ವಿ.ವಿಜಯ್‌ಕುಮಾರ್, ಎನ್.ಗಿರೀಶ್‌ರೆಡ್ಡಿ, ಎನ್.ವಿ.ನಾರಾಯಣಸ್ವಾಮಿ, ವೆಂಕಟಾಚಲಪತಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.