ಮಂಗಳವಾರ, ಸೆಪ್ಟೆಂಬರ್ 21, 2021
20 °C

ಡಿಕೆಶಿ–ಶಾಸಕ ಶ್ರೀನಿವಾಸಗೌಡ ಭೇಟಿ: ಕುತೂಹಲ ಕೆರಳಿಸಿದ ಉಭಯ ನಾಯಕರ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡರು ಕಾಂಗ್ರೆಸ್‌ ಸೇರುವ ಮಾತು ಬಲವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಬುಧವಾರ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಶ್ರೀನಿವಾಸಗೌಡರು ಜೆಡಿಎಸ್‌ ತೊರೆಯುವ ಬಗ್ಗೆ ಕ್ಷೇತ್ರದಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಚರ್ಚೆಯಾಗುತ್ತಿದೆ. ಈ ನಡುವೆ ಕೆ.ಸಿ ವ್ಯಾಲಿ ಯೋಜನೆ ವಿಚಾರವಾಗಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಶ್ರೀನಿವಾಸಗೌಡರು ಸಾರ್ವಜನಿಕವಾಗಿ ಟೀಕಿಸಿದ್ದರು.

ಶ್ರೀನಿವಾಸಗೌಡರ ಈ ನಡೆಯಿಂದ ಕೆರಳಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಪಕ್ಷವು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಿದೆ ಎಂದು ಇತ್ತೀಚೆಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಶ್ರೀನಿವಾಸಗೌಡರು ವರಿಷ್ಠರಿಗೆ ಸೆಡ್ಡು ಹೊಡೆದು ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್‌ರನ್ನು ಭೇಟಿಯಾಗಿ ಒಂದು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿ ಪಕ್ಷ ತೊರೆಯುವ ಸಂದೇಶ ರವಾನಿಸಿದ್ದಾರೆ.

ಶ್ರೀನಿವಾಸಗೌಡರು ಕಳೆದ ಕೆಲ ದಿನಗಳಿಂದ ಜೆಡಿಎಸ್‌ನ ಸಭೆ, ಸಮಾರಂಭಗಳಿಂದ ದೂರ ಉಳಿದಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರನನ್ನು ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿಸಲು ತೆರೆಮರೆಯ ಕಸರತ್ತು ನಡೆಸಿರುವ ಅವರು ಶಿವಕುಮಾರ್‌ರನ್ನು ಭೇಟಿಯಾಗಿರುವುದು ಹೆಚ್ಚು ಮಹತ್ವ ಪಡೆದಿದೆ.

ಭೇಟಿ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸಗೌಡರು, ‘ವೈಯಕ್ತಿಕ ವಿಚಾರಕ್ಕೆ ಶಿವಕುಮಾರ್‌ರನ್ನು ಭೇಟಿಯಾಗಿದ್ದೇನೆ. ಅವರೊಂದಿಗೆ ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ. ಜೆಡಿಎಸ್‌ ತೊರೆಯುವುದಾದರೆ ಸಾರ್ವಜನಿಕವಾಗಿಯೇ ಹೇಳುತ್ತೇನೆ’ ಎಂದು ತಿಳಿಸಿದರು.

‘ನಾನು 4 ಬಾರಿಯೂ ಬೇರೆ ಬೇರೆ ಪಕ್ಷದಿಂದ ಗೆದ್ದು ಶಾಸಕನಾಗಿದ್ದೇನೆ. ಮಾಧ್ಯಮಗಳಿಗೆ ಸುಳ್ಳು ಹೇಳುವುದಿಲ್ಲ. ಸಮಯ ಬಂದಾಗ ಎಲ್ಲಾ ಮಾತನಾಡುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು