ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದ ಮನೆಯಂತಾಗಿರುವ ಜೆಡಿಎಸ್‌ ಸದ್ಯದಲ್ಲೇ ಛಿದ್ರವಾಗಲಿದೆ: ವರ್ತೂರು ಪ್ರಕಾಶ್

ಶ್ರೀನಿವಾಸಗೌಡ ಕಾಂಗ್ರೆಸ್‌ ಸೇರುತ್ತಾರೆ: ಮಾಜಿ ಶಾಸಕ ವರ್ತೂರು ಪ್ರಕಾಶ್ ಭವಿಷ್ಯ
Last Updated 2 ಆಗಸ್ಟ್ 2021, 14:53 IST
ಅಕ್ಷರ ಗಾತ್ರ

ಕೋಲಾರ: ‘ಕ್ಷೇತ್ರದಲ್ಲಿ ಒಡೆದ ಮನೆಯಂತಾಗಿರುವ ಜೆಡಿಎಸ್‌ ಸದ್ಯದಲ್ಲೇ ಛಿದ್ರವಾಗಲಿದೆ. ಜೆಡಿಎಸ್‌ ಮನೆಯಿಂದ ಒಂದು ಕಾಲು ಹೊರಗಿಟ್ಟಿರುವ ಶಾಸಕ ಕೆ.ಶ್ರೀನಿವಾಸಗೌಡರು ಕಾಂಗ್ರೆಸ್ ಸೇರಲಿದ್ದು, ಜೆಡಿಎಸ್‌ ಇಬ್ಭಾಗವಾಗಲಿದೆ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಭವಿಷ್ಯ ನುಡಿದರು.

ಇಲ್ಲಿ ಸೋಮವಾರ ನಡೆದ ನರಸಾಪುರ ಜಿ.ಪಂ ಮತ್ತು ತಾ.ಪಂ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಹಾಗೂ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ‘ತಾಲ್ಲೂಕಿನ ಹೋಳೂರು ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಶ್ರೀನಿವಾಸಗೌಡರು ಶಾಸಕ ರಮೇಶ್‌ಕುಮಾರ್‌ರ ಜತೆಗೆ ಇರುವುದಾಗಿ ಹೇಳಿದ್ದಾರೆ. ಈ ಸಂಗತಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಲುಪಿದೆ’ ಎಂದರು.

‘ಶ್ರೀನಿವಾಸಗೌಡರು ತಮ್ಮ ಮಗನಿಗೆ ಹೋಳೂರು ಹೋಬಳಿಯಲ್ಲಿ ಕಾಂಗ್ರೆಸ್‌ನಿಂದ ಜಿ.ಪಂ ಚುನಾವಣೆಗೆ ಟಿಕೆಟ್‌ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಕ್ಷೇತ್ರದಲ್ಲಿ ರಾಜಕೀಯವಾಗಿ ಅವರ ಶಕ್ತಿ ಕುಂದುತ್ತಿದೆ. ಅವರು ಕಾಂಗ್ರೆಸ್‌ ಸೇರುತ್ತಿದ್ದಂತೆ ಜೆಡಿಎಸ್‌ನ ಹಲವರು ನಮ್ಮ ಕಡೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಶೇ 20ರಷ್ಟು ಮಂದಿ ಅವರ ಜತೆ ಹೋಗಬಹುದು’ ಎಂದು ಹೇಳಿದರು.

‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿಲ್ಲ. ಕಾಂಗ್ರೆಸ್ ಗೆಲ್ಲಬೇಕಾದರೆ ನಮ್ಮ ಕಾರ್ಯಕರ್ತರ ಬೆಂಬಲ ಬೇಕೇಬೇಕು. ನಮ್ಮದೇ ಮೂಲ ಕಾಂಗ್ರೆಸ್. ಆ ಪಕ್ಷದಿಂದ ಹೊಸಬರು ಯಾರು ಬಂದರೂ ಗೆಲ್ಲುವುದಿಲ್ಲ. ನಾವು ಒಗ್ಗಟ್ಟಾಗಿ ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದರೆ ಕಾಂಗ್ರೆಸ್‌ನವರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಕೊಡುಗೆ ಶೂನ್ಯ: ‘ಕ್ಷೇತ್ರಕ್ಕೆ ಶ್ರೀನಿವಾಸಗೌಡರ ಕೊಡುಗೆ ಶೂನ್ಯ. ನಾನು ಶಾಸಕನಾಗಿದ್ದಾಗ ಮಂಜೂರಾದ ಕಾಮಗಾರಿಗಳಿಗೆ ಶ್ರೀನಿವಾಸಗೌಡರು ಈಗ ಚಾಲನೆ ನೀಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಚಾಲಚಂದ್ರ ಜಾರಕಿಹೊಳಿ ಅವರು ಪೌರಾಡಳಿತ ಸಚಿವರಾಗಿದ್ದಾಗ ಕೋಲಾರದ ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತ ಹಾಗೂ ಡೂಂಲೈಟ್‌ ವೃತ್ತದಿಂದ ಕ್ಲಾಕ್‌ಟವರ್‌ವರೆಗಿನ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿತ್ತು. ನಾನು ಯಡಿಯೂರಪ್ಪ ಪರ ನಿಂತಿದ್ದಕ್ಕೆ ವಿಶೇಷ ಅನುದಾನ ನೀಡಿದ್ದರು’ ಎಂದರು.

‘ಬಿಜೆಪಿ ಶಾಸಕ ವಿಶ್ವನಾಥ್ ಅವರು ಹಿಂದೆ ಆಪರೇಷನ್ ಕಮಲದ ಸಂದರ್ಭದಲ್ಲಿ ಕೊಟ್ಟಿದ್ದ ₹ 5 ಕೋಟಿಯನ್ನು ಶ್ರೀನಿವಾಸಗೌಡರು ರಹಸ್ಯವಾಗಿ ಇಟ್ಟಿದ್ದರೆ ಯಡಿಯೂರಪ್ಪ ಅವರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಪಡೆಯಬಹುದಿತ್ತು. ಆದರೆ, ಶ್ರೀನಿವಾಸಗೌಡರು ಆ ರಹಸ್ಯ ಬಹಿರಂಗಪಡಿಸಿ ಹೆಸರು ಕೆಡಿಸಿಕೊಂಡರು’ ಎಂದು ಹೇಳಿದರು.

ಆನೆ ಬಲ: ‘ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದಾಗಲೂ ಶ್ರೀನಿವಾಸಗೌಡರು ಅವರ ಮನೆ ಬಾಗಿಲಿಗೆ ಹೋಗಲಿಲ್ಲ. ಅವರ ರಾಜಕೀಯ ತಪ್ಪಿನಿಂದ ಕ್ಷೇತ್ರದ ಅಬಿವೃದ್ಧಿಗೆ ಹೆಚ್ಚಿನ ಅನುದಾನ ಬರಲಿಲ್ಲ’ ಎಂದು ದೂರಿದರು.

‘2008ರ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದವರು ಈಗಲೂ ಜತೆಗಿರುವುದರಿಂದ ಆನೆ ಬಲ ಬಂದಿದೆ. ಹಿಂದಿನ ಚುನಾವಣೆಯಲ್ಲಿ ಹಣಕಾಸು ಸಮಸ್ಯೆಯಿಂದ ಸೋತೆ. ಆದರೂ ಜನ ನನ್ನ ಕೈ ಬಿಟ್ಟಿಲ್ಲ. ಈ ಮಧ್ಯೆ ಕೆಲವರು ಕ್ಷೇತ್ರಕ್ಕೆ ಬಂದು ವಾಪಸ್ ಹೋದರು. ಬೆಂಬಲಿಗರು ಎದೆಗುಂದ ಬೇಡಿ. ಕಾಂಗ್ರೆಸ್ ಸೇರ್ಪಡೆ ಸಾಧ್ಯವಾಗದಿದ್ದರೆ ಹೊಲಿಗೆ ಯಂತ್ರದ ಗುರುತು ಇದೆ. ನನ್ನ ಎದುರು ಕಾಂಗ್ರೆಸ್ ಹೀನಾಯವಾಗಿ ಸೋಲುತ್ತದೆ’ ಎಂದು ವ್ಯಂಗ್ಯವಾಡಿದರು.

ಕಾಲ ಪಕ್ವವಾಗಿಲ್ಲ: ‘ವರ್ತೂರು ಪ್ರಕಾಶ್‌ರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಅವರು ಒಪ್ಪಿದ್ದರೂ ಈಗ ಕಾಲ ಪಕ್ವವಾಗಿಲ್ಲ. ಸಿದ್ದರಾಮಯ್ಯ ಒಪ್ಪಿದರೂ ತಾನು ಒಪ್ಪಲ್ಲ ಎಂದು ಕೆ.ಎಚ್.ಮುನಿಯಪ್ಪ ಪಟ್ಟು ಹಿಡಿದಿದ್ದಾರೆ. ಜಿ.ಪಂ ಚುನಾವಣೆಗೆ ನಮ್ಮ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ನಿಲ್ಲಿಸಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಿಸಿದರೆ ಮುಂದೆ ಕಾಂಗ್ರೆಸ್‌ ಮುಖಂಡರೇ ಕರೆದು ಟಿಕೆಟ್ ಕೊಡುತ್ತಾರೆ’ ಎಂದು ದರಖಾಸ್ತು ಸಮಿತಿ ಮಾಜಿ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್‌ ಹೇಳಿದರು.

ನರಸಾಪುರ ಜಿ.ಪಂ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಜಿ.ಪಂ ಮಾಜಿ ಸದಸ್ಯ ಅರುಣ್‌ಪ್ರಸಾದ್, ಮುಖಂಡ ಪಾಪಣ್ಣ, ತಾ.ಪಂ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ ಇಂಗಿತ ವ್ಯಕ್ತಪಡಿಸಿದರು. ಜಿ.ಪಂ ಮಾಜಿ ಸದಸ್ಯೆ ರೂಪಶ್ರೀ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೃಷ್ಣೇಗೌಡ ಹಾಗೂ ಬೆಂಬಲಿಗರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT