ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿಗೆ ವಿದಾಯ | ಮುಂಬರುವ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ: ಸಿದ್ದರಾಮಯ್ಯ

ಹೈಕಮಾಂಡ್‌ನ ಅಂತಿಮ ತೀರ್ಮಾನಕ್ಕೆ ಬದ್ಧ
Last Updated 9 ಜನವರಿ 2023, 18:10 IST
ಅಕ್ಷರ ಗಾತ್ರ

ಕೋಲಾರ: ‌ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದಲೇ ಕಣಕ್ಕಿಳಿಯುವುದಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದರು. ಇದರೊಂದಿಗೆ ಹಲವು ತಿಂಗಳಿಂದ ಕ್ಷೇತ್ರ ಹುಡುಕಾಟದ ಕಸರತ್ತಿಗೆ ತೆರೆಬಿದ್ದಿದೆ.

ನಗರದ ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದರು. ಇದರೊಂದಿಗೆ ಬಾದಾಮಿ ಕ್ಷೇತ್ರಕ್ಕೆ ವಿದಾಯ ಹೇಳಿದಂತಾಗಿದೆ.

‘ನಿಮ್ಮ ಪ್ರೀತಿ, ಅಭಿಮಾನವನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ. ಮುಂಬರುವ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ನಾನೇ ಕಾಂಗ್ರೆಸ್‌ ಅಭ್ಯರ್ಥಿ’ ಎಂದು ಘೋಷಿಸಿದರು.

‘ಹೈಕಮಾಂಡ್ ಒಪ್ಪಿಗೆ ಮೇಲೆ ನನ್ನ ನಿರ್ಧಾರ ಅವಲಂಬಿಸಿದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆಗೆ ಒಂದು ಪ್ರಕ್ರಿಯೆ ಇದೆ. ನಾನೇ ಏಕಾಂಗಿಯಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ. ಪಕ್ಷದಲ್ಲಿ ನನಗೆಂದೇ ವಿಶೇಷ ನಿಯಮ, ಸೌಲಭ್ಯ ಇಲ್ಲ. ಉಳಿದವರಂತೆ ನಾನು ಕೂಡ ಒಬ್ಬ’ ಎಂದರು.

‘ಜನರ ಆಶೀರ್ವಾದ ಇದ್ದರೆ ಮಾತ್ರ ರಾಜಕೀಯ ಮಾಡಲು ಸಾಧ್ಯ. ಚಾಮುಂಡೇಶ್ವರಿ ಕ್ಷೇತ್ರದಿಂದ ಐದು ಬಾರಿ, ವರುಣಾ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿದ್ದೇನೆ. ಸದ್ಯ ನಾನು ಬಾದಾಮಿ ಶಾಸಕ. ನನಗೆ ಕ್ಷೇತ್ರವೇ ಸಿಗುತ್ತಿಲ್ಲವೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ವರುಣಾದಿಂದಲೂ ಸ್ಪರ್ಧಿಸಿ ಎಂಬುದಾಗಿ ಅಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ. ಬೆಂಗಳೂರಿನಿಂದ ಸಂಚರಿಸಲು ಹೆಲಿಕಾಪ್ಟರ್‌ ಕೊಡಿಸುವುದಾಗಿ ಬಾದಾಮಿ ಕ್ಷೇತ್ರದ ಜನರು ಹೇಳಿದ್ದಾರೆ’ ಎಂದರು.

‘ಇಲ್ಲಿನ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ, ಪಕ್ಷದ ಹಿರಿಯ ಮುಖಂಡ ಕೆ.ಎಚ್‌.ಮುನಿಯಪ್ಪ, ನನ್ನ ಗೆಳೆಯ ಕೆ.ಆರ್‌.ರಮೇಶ್‌ ಕುಮಾರ್‌, ನಜೀರ್‌ ಅಹ್ಮದ್‌, ಕೃಷ್ಣ ಬೈರೇಗೌಡ, ಎಂ.ಎಲ್‌.ಅನಿಲ್‌ ಕುಮಾರ್‌, ವಿ.ಆರ್‌.ಸುದರ್ಶನ್‌ ಹಾಗೂ ಇತರ ಮುಖಂಡರು ಕೋಲಾ ರದಲ್ಲೇ ಸ್ಪರ್ಧಿಸಬೇಕೆಂದು ಆಹ್ವಾನ ನೀಡಿದ್ದಾರೆ’ ಎಂದು ಹೇಳಿದರು.

‘ವರುಣಾದಿಂದಲೂ ಸ್ಪರ್ಧಿಸುತ್ತೀರಾ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಗರಂ ಆದರು. ‘ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲ್ಲ. ವರುಣಾದ ಜನರೂ ಆಹ್ವಾನಿಸುತ್ತಿದ್ದಾರೆ. ಆದರೆ, ಆ ಕ್ಷೇತ್ರದ ಹಾಲಿ ಶಾಸಕ ಡಾ.ಯತೀಂದ್ರ ಇದ್ದಾರಲ್ಲವೇ’ ಎಂದು ಮರು ಪ್ರಶ್ನಿಸಿದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಚಾಮುಂಡೇಶ್ವರಿಯಲ್ಲಿ ಸೋಲು ಹಾಗೂ ಬಾದಾಮಿಯಲ್ಲಿ ಗೆಲುವು ಕಂಡಿದ್ದರು.

‘ಸ್ಪರ್ಧೆಗೆ ಸ್ವಾಗತ; ನಿಯಮ ಪಾಲಿಸಲಿ’
‘ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದನ್ನು ಸ್ವಾಗತಿಸುತ್ತೇನೆ. ಅವರ ಪರ ಕೆಲಸವೂ ಮಾಡುತ್ತೇವೆ. ಆದರೆ, ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್‌ ಪಕ್ಷದಲ್ಲಿ ನಿಯಮ ಇದೆ. ಕೆಪಿಸಿಸಿ ಅಧ್ಯಕ್ಷರಿರಲಿ, ಶಾಸಕಾಂಗ ಪಕ್ಷದ ನಾಯಕರಿರಲಿ, ಪಕ್ಷದ ನಿಯಮದ ಪ್ರಕಾರವೇ ಅಭ್ಯರ್ಥಿ ಆಯ್ಕೆ ನಡೆಯಬೇಕು’ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT