ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮೇಶ್ವರ ಸಾಮಾಜಿಕ ಕ್ರಾಂತಿಯ ಹರಿಕಾರ

ಶ್ರೇಷ್ಠ ವಚನಕಾರ: ಜಿಲ್ಲಾಧಿಕಾರಿ ಸತ್ಯಭಾಮ ಬಣ್ಣನೆ
Last Updated 14 ಜನವರಿ 2021, 16:05 IST
ಅಕ್ಷರ ಗಾತ್ರ

ಕೋಲಾರ: ‘ವಚನಕಾರರ ಹಾದಿಯಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕ ದುಡಿಮೆ ಮತ್ತು ಸೇವೆ ಮೂಲಕ ಜನಮನ ತಲುಪಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕಿವಿಮಾತು ಹೇಳಿದರು.

ಜಿಲ್ಲಾಡಳಿತವು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಮಾತನಾಡಿ, ‘ಶಿವಭಕ್ತರಾಗಿದ್ದ ಸಿದ್ದರಾಮೇಶ್ವರರು ಶ್ರಮಕ್ಕಿಂತ ಮಿಗಿಲಾದ ದೇವರಿಲ್ಲ. ಕಾಯಕದಲ್ಲಿ ಕೈಲಾಸ ಕಾಣಬೇಕೆಂದು ಎಂದು ಕರೆ ನೀಡಿದ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು’ ಎಂದು ಅಭಿಪ್ರಾಯಪಟ್ಟರು.

‘ರಾಜ್ಯದ ಇತಿಹಾಸದಲ್ಲಿ 12ನೇ ಶತಮಾನವು ಪ್ರಮುಖ ಕಾಲಘಟ್ಟವಾಗಿದೆ. ಅನೇಕ ವಚನಕಾರರು ವಚನಗಳ ಮೂಲಕ ಸಮಾಜಕ್ಕೆ ಸಂದೇಶ ಸಾರಿ, ಕ್ರಾಂತಿಕಾರಕ ಬದಲಾವಣೆ ತಂದರು. ವಚನಗಳು ಸಾರ್ವಕಾಲಿಕ. ಸಿದ್ದರಾಮೇಶ್ವರರು 68 ಸಾವಿರ ವಚನ ರಚಿಸಿ ಹಾಡಿದ್ದಾರೆ. ಅವರ ಕುರಿತು ಪುರಾಣ ಪುಸ್ತಕವಿದ್ದು, ಪ್ರತಿಯೊಬ್ಬರು ಅಧ್ಯಯನ ಮಾಡಬೇಕು’ ಎಂದರು.

‘ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶ್ರೇಷ್ಠ ವಚನಕಾರರು. ಬಸವಣ್ಣ ರಾಜಕೀಯ ಮತ್ತು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದರು. ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೊಡಗಿದ್ದರು. ಅಧ್ಯಾತ್ಮ ಪರಂಪರೆ ಹೊಂದಿರುವ ದೇಶದಲ್ಲಿ ದಿವ್ಯಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆ ಅನುಷ್ಠಾನಕ್ಕೆ ತರಬೇಕು’ ಎಂದು ಸಲಹೆ ನೀಡಿದರು.

‘ಕ್ರಾಂತಿಯ ಪರ್ವವಾದ 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹ. ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದ ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಸಮ ಸಮಾಜದಲ್ಲಿ ಎಲ್ಲರೂ ಒಂದೇ ಎಂಬುದನ್ನು ಅರಿತು ಕೆಲಸ ಮಾಡಿದರು’ ಎಂದು ಸ್ಮರಿಸಿದರು.

‘ಸಿದ್ದರಾಮೇಶ್ವರರು ಅಸಂಖ್ಯಾತ ಕೆರೆ, ಬಾವಿ ಕಟ್ಟಿಸಿದರು. ಅಲ್ಲದೇ, ಸಾರ್ವಜನಿಕರ ಉಪಯೋಗಕ್ಕೆ ರಸ್ತೆ, ದೇವಾಲಯ ನಿರ್ಮಿಸಿದರು. ಇವರಷ್ಟು ಜನಕಲ್ಯಾಣ ಕಾರ್ಯಗಳನ್ನು ಮಾಡಿ ಕಾಯಕದ ಮಹತ್ವ ಸಾರಿದ ಶಿವಶರಣರು ಮತ್ತೊಬ್ಬರಿಲ್ಲ. ಇಂತಹ ಮಹನೀಯರ ವಿಚಾರಧಾರೆ, ತತ್ವಾದರ್ಶವನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದು ತಿಳಿಸಿದರು.

ಮಹಾ ದಾರ್ಶನಿಕರು: ‘ಹೆಣ್ಣನ್ನು ಸಮಾನವಾಗಿ ಕಂಡ ಸಿದ್ದರಾಮೇಶ್ವರರು ಕುಲ ವಿರೋಧಿಯಾಗಿದ್ದರು. ಅವರು ಜಡ್ಡುಗಟ್ಟಿದ ಸಮಾಜವನ್ನು ಕ್ರಿಯಾಶೀಲತೆಯೆಡೆಗೆ ಕೊಂಡೊಯ್ದ ಮಹಾ ದಾರ್ಶನಿಕರು’ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಬಣ್ಣಿಸಿದರು.

‘ಸಿದ್ದರಾಮೇಶ್ವರರು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ದುಡಿದರು. ಎಲ್ಲಾ ವಚನಕಾರರು ಇದೇ ಹಾದಿಯಲ್ಲಿ ನಡೆದವರು. ಜಿಲ್ಲೆಯಲ್ಲಿ ಬೋವಿ ಸಮಾಜಕ್ಕೆ ಸರ್ಕಾರ ನಿವೇಶನ ಮಂಜೂರು ಮಾಡಿದೆ. ಮುಂದೆ ಆ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸಿ ಅಲ್ಲಿಯೇ ಕಾರ್ಯಕ್ರಮ ನಡೆಸಲಾಗುತ್ತದೆ’ ಎಂದು ಜಿ.ಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಭರವಸೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಬೋವಿ ಸಮುದಾಯದ ಮುಖಂಡರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT