ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ವಿರುದ್ಧ ಧಿಕ್ಕಾರ ಕೂಗಿದ್ದ ಪ್ರಕರಣ: ಬಂಧನಕ್ಕೆ ಆಗ್ರಹ

ನಗರಸಭೆ ಸದಸ್ಯ ಅಂಬರೀಷ್‌ ವಿರುದ್ಧ ಎಫ್‌ಐಆರ್‌
Last Updated 10 ಡಿಸೆಂಬರ್ 2022, 16:11 IST
ಅಕ್ಷರ ಗಾತ್ರ

ಕೋಲಾರ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪರಿನಿಬ್ಬಾಣ ದಿನದಂದು ಅಂಬೇಡ್ಕರ್‌ ಅವರಿಗೆ ಧಿಕ್ಕಾರ ಕೂಗಿದ ಆರೋಪದ ಮೇಲೆ ಕೋಲಾರ ನಗರಸಭೆ ಸದಸ್ಯ ಅಂಬರೀಷ್‌ ಹಾಗೂ ಇತರರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಭಾರತೀಯ ದಂಡ ಸಂಹಿತೆ–1860ರ ಅಡಿ ಅಕ್ರಮವಾಗಿ ತಡೆಯುವುದು (341), ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಎಸಗಿದ ಕೃತ್ಯ (295) ಹಾಗೂ ಅಪರಾಧ ಸಂಚು (34) ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಮಗೆ ಆಹ್ವಾನ ನೀಡದೆ ಪರಿನಿಬ್ಬಾಣ ದಿನ ಆಚರಿಸಲಾಗುತ್ತಿದೆ ಎಂದು ಪೌರಾಯುಕ್ತೆ ಸುಮಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಡಿ.6 ರಂದು ಕೆಲ ಸದಸ್ಯರು ನಡೆಸಿದ ಪ್ರತಿಭಟನೆಯಲ್ಲಿ ಅಂಬರೀಷ್‌, ಅಂಬೇಡ್ಕರ್‌ ಅವರಿಗೆ ಧಿಕ್ಕಾರ ಕೂಗಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸಂಬಂಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಒಕ್ಕೂಟದ ಪ್ರತಿನಿಧಿಗಳು ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಅಂಬರೀಷ್‌ ಸದಸ್ಯತ್ವ ರದ್ದುಪಡಿಸಲು ಆಗ್ರಹಿಸಿದ್ದರು.

‘ಬಾಯಿ ತಪ್ಪಿ ಅಂಬೇಡ್ಕರ್‌ ಅವರಿಗೆ ಧಿಕ್ಕಾರ ಎಂಬ ಪದ ಬಳಸಿದೆ’ ಎಂಬುದನ್ನು ಒಪ್ಪಿಕೊಂಡಿದ್ದ ಅಂಬರೀಷ್‌ ಬಳಿಕ ಕ್ಷಮೆಯಾಚಿಸಿದ್ದರು.

‘ಅಂಬೇಡ್ಕರ್‌ ಅವರ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿ ರಾಷ್ಟ್ರ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಘೋಷಣೆ ಕೂಗಿ ದೇಶದ್ರೋಹ ಎಸಗಿರುವ ಅಂಬರೀಷ್‌ ಹಾಗೂ ಇತರರನ್ನು ಬಂಧಿಸಿ ಕ್ರಮ ಜರುಗಿಸಬೇಕು’ ಎಂದು ಶನಿವಾರ ವಿ.ಕೆ.ರಾಜೇಶ್‌, ಸಿ.ಎನ್‌.ಅರುಣ್‌ ಪ್ರಸಾದ್‌ ಹಾಗೂ ಇತರ ಸಂಘಟನೆಗಳ ಸದಸ್ಯರು ಠಾಣೆಗೆ ದೂರು ನೀಡಿದರು.

ಠಾಣೆಗೆ ತೆರಳಿದ ಸದಸ್ಯರು, ‘ಭಾನುವಾರ ರಾತ್ರಿವರೆಗೆ ಆರೋಪಿಯ ಬಂಧನಕ್ಕೆ ಕಾಯ್ದು ಪೊಲೀಸ್ ವ್ಯವಸ್ಥೆ ಗೌರವಿಸಲಾಗುವುದು. ನಂತರವೂ ಕ್ರಮ ಆಗದಿದ್ದಲ್ಲಿ ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT