ಮಂಗಳವಾರ, ಸೆಪ್ಟೆಂಬರ್ 28, 2021
21 °C
ಅಂಗಡಿ– ದೇವಸ್ಥಾನ ಬಂದ್‌: ರಸ್ತೆಯಲ್ಲಿ ವಾಹನ ಸಂಚಾರ ವಿರಳ

ಕಂಕಣ ಸೂರ್ಯ ಗ್ರಹಣ: ಕೋಲಾರದಲ್ಲಿ ಬಂದ್ ವಾತಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕಂಕಣ ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಾನುವಾರ ವಾಣಿಜ್ಯ ವಹಿವಾಟು ಸ್ಥಗಿತಗೊಂಡು ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.

ಗ್ರಹಣದ ಕಾರಣಕ್ಕೆ ರಸ್ತೆಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಜನರ ಓಡಾಟ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಹಾಲು, ತರಕಾರಿ ಅಂಗಡಿಗಳು ಹಾಗೂ ಮಾರುಕಟ್ಟೆಗಳಲ್ಲಿ ವಹಿವಾಟು ತಗ್ಗಿತ್ತು. ಹೋಟೆಲ್‌ಗಳು ಸಹ ಬಂದ್‌ ಆಗಿದ್ದವು. ಗ್ರಹಣದ ಸಂಬಂಧ ಸುದ್ದಿವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿದ್ದ ಕಾರಣ ಜನ ಆತಂಕಕ್ಕೆ ಒಳಗಾಗಿ ಮನೆಯಿಂದ ಹೊರ ಬರಲೇ ಇಲ್ಲ. ಗ್ರಹಣ ಸಂದರ್ಭದಲ್ಲಿ ಹೊರ ಹೋದರೆ ಕೆಟ್ಟದಾಗುತ್ತದೆ ಎಂಬ ಭಯದಿಂದ ಜನರು ಮನೆಯಲ್ಲೇ ಉಳಿದರು.

ಕೆಲ ಮನೆಗಳಲ್ಲಿ ಗ್ರಹಣ ಆರಂಭಕ್ಕೂ ಮುನ್ನವೇ ಮನೆ ಮಂದಿಯೆಲ್ಲಾ ಬೆಳಿಗ್ಗೆ 10 ಗಂಟೆಯೊಳಗೆ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ತಿಂಡಿ ಸೇವಿಸಿದರು. ಗ್ರಹಣ ದೋಷ ಪರಿಹಾರಕ್ಕೆಂದು ಹಲವರು ಗ್ರಹಣಕ್ಕೂ ಮುನ್ನ ಮತ್ತು ನಂತರ ಸ್ನಾನ ಮಾಡಿದರು. ಮನೆಗಳಲ್ಲಿ ಕುಡಿಯುವ ನೀರು ಹಾಗೂ ಅಡುಗೆ ಪಾತ್ರೆಗಳಿಗೆ ದರ್ಬೆ ಮತ್ತು ತುಳಸಿ ಎಲೆ ಹಾಕಲಾಗಿತ್ತು. ಗ್ರಹಣ ಮುಗಿದ ನಂತರ ಪಾತ್ರೆಗಳಲ್ಲಿನ ಹಳೆ ನೀರನ್ನು ಚೆಲ್ಲಿ ಹೊಸದಾಗಿ ನೀರು ತುಂಬಿಸಲಾಯಿತು. ಮನೆ ಶುದ್ಧೀಕರಿಸಿ ಪೂಜೆ ಮಾಡಲಾಯಿತು.

ದೇವಾಲಯ ಬಂದ್‌: ಭಕ್ತರು ಸಾಮಾನ್ಯವಾಗಿ ಬೆಳಿಗ್ಗೆ ದೇವಸ್ಥಾನಗಳಿಗೆ ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ, ಗ್ರಹಣದ ಕಾರಣಕ್ಕೆ ಭಕ್ತರು ಬೆಳಿಗ್ಗೆ ದೇವಸ್ಥಾನಗಳತ್ತ ಸುಳಿಯಲಿಲ್ಲ. ನಗರದ ವೆಂಕಟರಮಣಸ್ವಾಮಿ, ದೊಡ್ಡ ಆಂಜನೇಯಸ್ವಾಮಿ, ಕೆಇಬಿ ಗಣೇಶ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳು ಬಂದ್‌ ಆಗಿದ್ದವು. ಬೆಳಗಿನ ಪೂಜೆಯ ನಂತರ ಕೆಲ ದೇವಸ್ಥಾನಗಳ ಬಾಗಿಲು ಮುಚ್ಚಲಾಯಿತು.

ಗ್ರಹಣದ ಅವಧಿ ಮುಗಿದ ಬಳಿಕ ಅರ್ಚಕರು ದೇವಸ್ಥಾನಗಳ ಬಾಗಿಲು ತೆರೆದು ಗರ್ಭಗುಡಿ ಸೇರಿದಂತೆ ಇಡೀ ಆವರಣ ಸ್ವಚ್ಛಗೊಳಿಸಿದರು. ದೇವರ ಮೂರ್ತಿಗಳಿಗೆ ಎಳನೀರು, ಹಾಲಿನ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನಗಳಲ್ಲಿ ಸಂಜೆ ಭಕ್ತರ ದಂಡೇ ಕಂಡುಬಂತು.

ಪರಿಹಾರ ಪೂಜೆ: ಹಲವು ದೇವಾಲಯಗಳಲ್ಲಿ ಮಧ್ಯಾಹ್ನ ಗ್ರಹಣ ದೋಷ ಪರಿಹಾರ ಪೂಜೆ ನಡೆಸಲಾಯಿತು. ದೇವರಿಗೆ ಅಭಿಷೇಕ ಮತ್ತು ರುದ್ರಾಭಿಷೇಕ ಮಾಡಲಾಯಿತು. ಹಲವು ಭಕ್ತರು ಗೋಧಿ, ಹುರಳಿ, ಕಡಲೆ ಧಾನ್ಯ ನೀಡಿ ದೋಷ ಪರಿಹಾರ ಪೂಜೆ ಮಾಡಿಸಿದರು.
ಮನೆಗಳಲ್ಲಿ ಗ್ರಹಣ ಶಾಂತಿಗಾಗಿ ಗ್ರಹಣದ ಆರಂಭದಲ್ಲೇ ಪ್ರತ್ಯೇಕವಾಗಿ ಎಲೆಯಲ್ಲಿ ಅನ್ನ ಎತ್ತಿಟ್ಟು ಮಜ್ಜಿಗೆ ಮತ್ತು ಹಾಲು ಸುರಿದು (ತಣಿವು ಮುದ್ದೆ) ಬೇವಿನ ಸೊಪ್ಪು, ಹೂವು ಮುಡಿಸಿ ಹಾಗೂ ಅರಿಶಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಯಿತು. ಗ್ರಹಣದ ಅವಧಿ ಮುಗಿದ ಬಳಿಕ ಆ ಅನ್ನವನ್ನು ಪುಷ್ಕರಣಿ, ಕೆರೆ ಕುಂಟೆಗಳಲ್ಲಿ ಸುರಿಯಲಾಯಿತು.

ಗ್ರಹಣ ವೀಕ್ಷಣೆ: ಬಡಾವಣೆಗಳಲ್ಲಿ ಮಕ್ಕಳು ಸೋಲಾರ್‌ ಫಿಲ್ಟರ್‌ ಕನ್ನಡಕ ಧರಿಸಿ ಪ್ರಕೃತಿಯ ಸುಂದರ ಹಾಗೂ ಅಪರೂಪದ ನೈಸರ್ಗಿಕ ವಿದ್ಯಮಾನವಾದ ಗ್ರಹಣ ವೀಕ್ಷಿಸಿದರು. ಗ್ರಹಣದ ಆರಂಭದಲ್ಲಿ ಕೆಲ ಕಾಲ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ. ಮಕ್ಕಳು ಹಾಗೂ ಪೋಷಕರು ಹಳೆಯ ಎಕ್ಸ್‌ರೆ, ಕೂಲಿಂಗ್ ಕನ್ನಡಕ ಹಾಕಿಕೊಂಡು ಗ್ರಹಣ ವೀಕ್ಷಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು