ಶನಿವಾರ, ಮೇ 28, 2022
25 °C

ಶ್ರೀನಿವಾಸಪುರ: ಮೊಟ್ಟೆಯನ್ನೂ ಬಿಡದ ಮೂಢನಂಬಿಕೆ

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ (ಕೋಲಾರ ಜಿಲ್ಲೆ): ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ರೈತರೊಬ್ಬರು ಸಾಕಿರುವ ನಾಟಿ ಕೋಳಿಯೊಂದು ವಿವಿಧ ಗಾತ್ರದ ಮೊಟ್ಟೆಗಳನ್ನು ಇಡುವುದರ ಮೂಲಕ ಜನರ ಗಮನ ಸೆಳೆದಿದೆ.

‘ಈ ಕೋಳಿ ಮೊದಲ ಸಲ 11 ಮೊಟ್ಟೆ ಇಟ್ಟಿತ್ತು. ಮೊಟ್ಟೆಗಳ ಗಾತ್ರದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಎಂಟು ಮರಿಗಳನ್ನೂ ಮಾಡಿತ್ತು. ಮರಿಗಳನ್ನು ಬಿಟ್ಟ ಮೇಲೆ, ಎರಡನೇ ಸಲ ಮೊಟ್ಟೆ ಇಡುತ್ತಿದೆ. ಪ್ರಾರಂಭದಲ್ಲಿ ಮೊಟ್ಟೆಗಳು ಸಾಮಾನ್ಯ ಗಾತ್ರ ಹೊಂದಿದ್ದವು. ಮತ್ತೆ ಚಿಕ್ಕದಾದ, ಇನ್ನೂ ಚಿಕ್ಕದಾದ ಮೊಟ್ಟೆ ಇಡಲು ಪ್ರಾರಂಭಿಸಿತು. ಕೋಳಿ ಮೊಟ್ಟೆ ಗೌಜಿಗ ಹಕ್ಕಿ ಮೊಟ್ಟೆಯ ಗಾತ್ರದ ಮೊಟ್ಟೆ ಇಡುವುದನ್ನು ಕಂಡು ಆಶ್ಚರ್ಯವಾಯಿತು’ ಎಂದು ರೈತ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇಂಥ ಅತಿ ಚಿಕ್ಕ ಕೋಳಿ ಮೊಟ್ಟೆಯನ್ನು ‘ಕಲ್ಲು ಮೊಟ್ಟೆ’ ಎಂದು ಕರೆಯುವುದು ರೂಢಿ. ಇಂಥ ಮೊಟ್ಟೆ ಇಡುವುದು ಅನಿಷ್ಟದ ಸಂಕೇತ ಎಂದು ಗ್ರಾಮೀಣ ಜನರು ಭಾವಿಸುತ್ತಾರೆ. ಇದನ್ನು ಬಲಿ ಕೊಡಬೇಕು ಎನ್ನುತ್ತಾರೆ.

ಕಲ್ಲು ಮೊಟ್ಟೆ ಇಟ್ಟ ಕೋಳಿಯನ್ನು ಬಲಿ ಕೊಡುವ ಮೊದಲು ಪೂಜೆ ಸಲ್ಲಿಸಲಾಗುತ್ತದೆ. ಮನೆಯ ಹಿರಿಯ ವ್ಯಕ್ತಿ ಹೊಸಿಲಿನ ಮೇಲೆ ಕತ್ತು ಕತ್ತರಿಸುತ್ತಾನೆ. ಆಗ ಮನೆ ಮಂದಿ ಬಂದ ಗ್ರಹಚಾರ ದೂರವಾಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಇದು ಪಾರಂಪರಿಕವಾಗಿ ನಡೆದು ಬಂದಿರುವ ಆಚರಣೆ.

‘ಕೋಳಿ ಸಾಕಣೆ ಮಾಡುವ ರೈತರು ಮೂಢನಂಬಿಕೆ ಬಿಡಬೇಕು. ಕೋಳಿಯ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಆದಾಗ ಕಡಿಮೆ ಗಾತ್ರದ ಮೊಟ್ಟೆ ಇಡುತ್ತದೆ. ಅದಕ್ಕೆ ಚಿಕಿತ್ಸೆ ನೀಡಬೇಕಾದ ಅಗತ್ಯವಿಲ್ಲ. ತಾನೇ ತಾನಾಗಿ ಸರಿಹೋಗುತ್ತದೆ’ ಎಂದು ಪಶು ವೈದ್ಯಾಧಿಕಾರಿ ಡಾ. ಆರ್.ನಾಗಭೂಷಣರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು