ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶದ ಗುಣಾತ್ಮಕತೆಯಲ್ಲಿ ಕೋಲಾರ ಜಿಲ್ಲೆ ಸಾಧನೆ: ಡಿಡಿಪಿಐ

1,239 ವಿದ್ಯಾರ್ಥಿಗಳಿಗೆ ಎ+ ಶ್ರೇಣಿ: ಡಿಡಿಪಿಐ ಜಯರಾಮರೆಡ್ಡಿ ಸಂತಸ
Last Updated 18 ಆಗಸ್ಟ್ 2020, 13:47 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗುಣಾತ್ಮಕತೆಗೆ ಒತ್ತು ನೀಡಿದ್ದು, ಈ ಬಾರಿ ಜಿಲ್ಲೆಯಲ್ಲಿ 1,239 ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ ಸಂತಸ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಶೇ 80.63ರಷ್ಟು ವಿದ್ಯಾರ್ಥಿಗಳು ಶೇ 60ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. 2019ರಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 12,927 ಇತ್ತು. ಈ ಬಾರಿ 14,160ಕ್ಕೇರಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ 17,346 ವಿದ್ಯಾರ್ಥಿಗಳಲ್ಲಿ 1,239 ಮಂದಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿ ಎ+ ಶ್ರೇಣಿ ಪಡೆದಿದ್ದಾರೆ. ಉಳಿದಂತೆ 3,629 ಮಂದಿ ಶೇ 80ರಿಂದ 89ರ ನಡುವೆ ಅಂಕ ಗಳಿಸಿ ಎ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

‘4,719 ವಿದ್ಯಾರ್ಥಿಗಳು ಶೇ 70ರಿಂದ 79ರವರೆಗೂ ಅಂಕ ಗಳಿಸಿ ಬಿ+ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 4,573 ಮಂದಿ ಶೇ 60ರಿಂದ 69ರ ನಡುವೆ ಅಂಕ ಗಳಿಸಿ ಬಿ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 2,691 ವಿದ್ಯಾರ್ಥಿಗಳು ಶೇ 50ರಿಂದ 59ರ ನಡುವೆ ಅಂಕ ಗಳಿಸಿ ಸಿ+ ಶ್ರೇಣಿಯಲ್ಲಿ, 495 ಮಂದಿ ಶೇ 35ರಿಂದ 49ರ ನಡುವೆ ಅಂಕ ಪಡೆದು ತೇರ್ಗಡೆಯಾಗಿದ್ದಾರೆ’ ಎಂದು ವಿವರಿಸಿದರು.

ಆಂಗ್ಲ ಮೇಲುಗೈ: ‘ಕನ್ನಡ ಮಾಧ್ಯಮದಿಂದ ಪರೀಕ್ಷೆಗೆ ಕುಳಿತಿದ್ದ 8,154 ವಿದ್ಯಾರ್ಥಿಗಳಲ್ಲಿ 7,099 ಮಂದಿ ಉತ್ತೀರ್ಣರಾಗಿ ಶೇ 87.06ರಷ್ಟು ಫಲಿತಾಂಶ ಬಂದಿದೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 10,927 ಮಕ್ಕಳಲ್ಲಿ 10,172 ಮಂದಿ ಉತ್ತೀರ್ಣರಾಗಿ ಶೇ 93ರಷ್ಟು ಫಲಿತಾಂಶ ಬಂದಿದೆ. ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಬರೆದ 126 ವಿದ್ಯಾರ್ಥಿಗಳಲ್ಲಿ 75 ಮಂದಿ ಉತ್ತೀರ್ಣರಾಗಿ ಶೇ 59.52 ಫಲಿತಾಂಶ ಬಂದಿದೆ’ ಎಂದರು.

ಗ್ರಾಮೀಣ ಮಕ್ಕಳ ಸಾಧನೆ: ‘ಪ್ರತಿ ವರ್ಷದಂತೆ ಈ ಬಾರಿಯೂ ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಮಕ್ಕಳೇ ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ ನಗರ ಪ್ರದೇಶದ 7,792 ವಿದ್ಯಾರ್ಥಿಗಳಲ್ಲಿ 6,768 ಮಂದಿ ಉತ್ತಿರ್ಣರಾಗಿ ಶೇ 86.86 ಫಲಿತಾಂಶ ಬಂದಿದೆ. ಗ್ರಾಮೀಣ ಪ್ರದೇಶದ 11,413 ಮಕ್ಕಳಲ್ಲಿ 10,578 ಮಂದಿ ಉತ್ತೀರ್ಣರಾಗುವ ಮೂಲಕ ಶೇ 92.67 ಫಲಿತಾಂಶ ಬಂದಿದೆ’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಹೇಳಿದರು.

‘ಪರಿಶಿಷ್ಟ ಜಾತಿ ಶೇ 82.84 ವಿದ್ಯಾರ್ಥಿಗಳು ಮತ್ತು ಪರಿಶಿಷ್ಟ ವರ್ಗದ ಶೇ 90.88 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರವರ್ಗ- 1ರ ಶೇ 89.93 ಮಕ್ಕಳು, ಪ್ರವರ್ಗ 2ಎಗೆ ಸೇರಿದ ಶೇ 92.09ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ. 2ಬಿ ವರ್ಗಕ್ಕೆ ಶೇ 83.16 ಫಲಿತಾಂಶ ಬಂದಿದ್ದರೆ, 3ಎ ವರ್ಗದ ಶೇ 89.69 ಮಕ್ಕಳು ಉತ್ತೀರ್ಣರಾಗಿದ್ದಾರೆ. 3ಬಿ ವರ್ಗದ ಶೇ 93.44, ಇತರೆ ವರ್ಗಗಳ ಶೇ 95.43ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT