ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಕ್ಕಳ ಸುರಕ್ಷತೆ ಮುಖ್ಯ- ಜಿಲ್ಲಾಧಿಕಾರಿ ಆರ್.ಸೆಲ್ವಮಣಿ

ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೆಲ್ವಮಣಿ ಸೂಚನೆ
Last Updated 9 ಜುಲೈ 2021, 14:20 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಈ ಬಾರಿ 20,525 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಅವರ ಸುರಕ್ಷತೆ ಮುಖ್ಯ. ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಗೊಂದಲಕ್ಕೆ ಅವಕಾಶವಿಲ್ಲದಂತೆ ಪರೀಕ್ಷೆ ನಡೆಸಿ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧ ಇಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಶಾಲಾ ಶಿಕ್ಷಕರ ಜತೆಗೆ ಸಿಬ್ಬಂದಿಗೂ ಕೋವಿಡ್‌ ಲಸಿಕೆ ಕಡ್ಡಾಯಗೊಳಿಸಿ. ಲಸಿಕೆ ಪಡೆದಿರುವ ಕುರಿತು ಖಾತ್ರಿಪಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಹಿಂದಿನ ವರ್ಷ ಕೋವಿಡ್ ಸಂದರ್ಭದಲ್ಲಿ 6 ದಿನದ ಪರೀಕ್ಷೆಯನ್ನೇ ಸುಗಮವಾಗಿ ನಡೆಸಿದ್ದೀರಿ. ಈ ಬಾರಿ ಕೇವಲ 2 ದಿನ ಪರೀಕ್ಷೆಯಿದ್ದು, ಎರಡೂ ದಿನವೂ ಕೇಂದ್ರಕ್ಕೆ ಕಡ್ಡಾಯವಾಗಿ ಸ್ಯಾನಿಟೈಸರ್ ಸಿಂಪಡಣೆ ಮಾಡಿಸಿ. ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ, ನಗರ ಪ್ರದೇಶದಲ್ಲಿ ನಗರಸಭೆಗಳ ವತಿಯಿಂದ ಪರೀಕ್ಷಾ ಕೇಂದ್ರಗಳ ಸ್ಯಾನಿಟೈಸ್‌ ಮಾಡಬೇಕು’ ಎಂದು ತಿಳಿಸಿದರು.

‘ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ ಮತ್ತು ಸುತ್ತಮುತ್ತಲಿನ ಜೆರಾಕ್ಸ್‌ ಅಂಗಡಿಗಳನ್ನು ಬಂದ್‌ ಮಾಡಿಸುತ್ತೇವೆ. ಮಕ್ಕಳ ಆರೋಗ್ಯ ತಪಾಸಣೆಗೆ ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು ಮತ್ತು ಭದ್ರತೆಗೆ ಪೊಲೀಸರನ್ನು ಕೇಂದ್ರಗಳಿಗೆ ನಿಯೋಜಿಸಲಾಗುತ್ತದೆ’ ಎಂದು ವಿವರಿಸಿದರು.

‘ಪರೀಕ್ಷೆ ನಡೆಸಿದರೆ ಮಾತ್ರ ಮಕ್ಕಳಲ್ಲಿ ಕಲಿಕೆಯ ಗಂಭೀರತೆ ಉಳಿಯಲು ಸಾಧ್ಯ. ಪರೀಕ್ಷೆಗೆ ಬರುವ ಮಕ್ಕಳು ಗುಂಪು ಸೇರದಂತೆ ಮಾರ್ಗದರ್ಶನ ನೀಡಿ. ಒಎಂಆರ್ ಶೀಟ್ ಬಳಕೆ ಕುರಿತು ಮಕ್ಕಳಲ್ಲಿನ ಆತಂಕ ದೂರ ಮಾಡಿ. ಪರೀಕ್ಷಾ ಕೇಂದ್ರಗಳಲ್ಲಿ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಚೆನ್ನಾಗಿರಬೇಕು’ ಎಂದು ಹೇಳಿದರು.

ಇತಿಹಾಸದಲ್ಲೇ ಮೊದಲು: ‘ಈ ಬಾರಿ ಹಿಂದಿನ ವರ್ಷದಷ್ಟು ಆತಂಕವಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬಹು ಆಯ್ಕೆಯ ಪ್ರಶ್ನೆಪತ್ರಿಕೆ ಕೊಡುತ್ತಿರುವುದು ಇತಿಹಾಸದಲ್ಲೇ ಇದೇ ಮೊದಲು. ಒಎಂಆರ್ ಶೀಟ್‌ ಕುರಿತು ಶಾಲಾ ಮಕ್ಕಳಿಗೆ ಅರಿವು ನೀಡುತ್ತೀರಿ. ಆದರೆ, ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳಿಗೆ ಹೇಗೆ?’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್‌.ಎಂ.ನಾಗರಾಜ್ ಪ್ರಶ್ನಿಸಿದರು.

‘ಪರೀಕ್ಷಾ ಗಾಂಭೀರ್ಯತೆಗೆ ಧಕ್ಕೆ ಬಾರದಂತೆ ಎಚ್ಚರ ವಹಿಸಿ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆ ನಡೆಸಿ. ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆಗೆ ಅವಕಾಶ ಕೊಡಬೇಡಿ’ ಎಂದು ಎಚ್ಚರಿಕೆ ನೀಡಿದರು.

117 ಕೇಂದ್ರ: ‘ಜಿಲ್ಲೆಯಲ್ಲಿ 117 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ತಲುಪಿಸಲು ಪೊಲೀಸ್ ಭದ್ರತೆಯೊಂದಿಗೆ 42 ಮಾರ್ಗ ರಚಿಸಲಾಗಿದೆ. ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ಶಿಕ್ಷಕರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಲಸಿಕೆ ಪಡೆಯದ ಶಿಕ್ಷಕರನ್ನು ಪರೀಕ್ಷಾ ಕೆಲಸಕ್ಕೆ ನಿಯೋಜಿಸಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಮಾಹಿತಿ ನೀಡಿದರು.

‘ಪರೀಕ್ಷಾ ಮಂಡಳಿ ನೀಡಿರುವ 34 ಪುಟಗಳ ಮಾರ್ಗಸೂಚಿಯಂತೆ ಪರೀಕ್ಷೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಶ್ನೆಪತ್ರಿಕೆ ಸಾಗಣೆಗೆ ಇತರೆ ಇಲಾಖೆಗಳ ವಾಹನಗಳನ್ನು ಒದಗಿಸಬೇಕು. ಜತೆಗೆ ಪ್ರಶ್ನೆಪತ್ರಿಕೆ ಕೊಂಡೊಯ್ಯುವ ವಾಹನಗಳಿಗೆ ಪೊಲೀಸ್‌ ಭದ್ರತೆ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಡಯಟ್ ಪ್ರಾಂಶುಪಾಲ ನಾಗೇಶ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಡಿವೈಪಿಸಿ ಗಂಗರಾಮಯ್ಯ, ಬಿಇಒಗಳಾದ ಕೆಂಪಯ್ಯ, ಕೃಷ್ಣಮೂರ್ತಿ, ಉಮಾದೇವಿ, ರಾಮಕೃಷ್ಣಪ್ಪ, ಆನಂದ್, ಚಂದ್ರಶೇಖರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT