ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 3ನೇ ವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ

ಮಕ್ಕಳ ಕಲಿಕೆ ಬಗ್ಗೆ ಗಮನಹರಿಸಿ: ಮುಖ್ಯ ಶಿಕ್ಷಕರಿಗೆ ಡಿಡಿಪಿಐ ಕೃಷ್ಣಮೂರ್ತಿ ಸೂಚನೆ
Last Updated 5 ಜೂನ್ 2021, 15:30 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಣ ಸಚಿವರ ಸಭೆಯ ನಿರ್ದೇಶನದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜುಲೈ 3ನೇ ವಾರಕ್ಕೆ ನಿಗದಿಯಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು ಕಲಿಕೆ ಬಗ್ಗೆ ಗಮನಹರಿಸಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಮುಖ್ಯ ಶಿಕ್ಷಕರಿಗೆ ಸೂಚಿಸಿದರು.

ಜಿಲ್ಲೆಯ ಬಂಗಾರಪೇಟೆ ಹಾಗೂ ಕೆಜಿಎಫ್ ತಾಲ್ಲೂಕಿನ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಜತೆ ಇಲ್ಲಿ ಶನಿವಾರ ಆನ್‌ಲೈನ್‌ ಮೂಲಕ ನಡೆದ ಸಭೆಯಲ್ಲಿ ಮಾತನಾಡಿ, ‘ಶಿಕ್ಷಣ ಸಚಿವರು ಪ್ರಶ್ನೆಪತ್ರಿಕೆ ಮಾದರಿ ಬದಲಾವಣೆ ಮಾಡಿ ಪರೀಕ್ಷೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ’ ಎಂದರು.

‘20 ದಿನ ಮುಂಚಿತವಾಗಿ ಪರೀಕ್ಷಾ ದಿನಾಂಕವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್‌ ಮತ್ತು ವಾಟ್ಸ್‌ಆ್ಯಪ್‌ ಮೂಲಕ ನಿರಂತರ ಸಂಪರ್ಕದಲ್ಲಿದ್ದು ಕಲಿಕೆಗೆ ನೆರವಾಗಬೇಕು’ ಎಂದು ಸಲಹೆ ನೀಡಿದರು.

‘ಭಾಷಾ ವಿಷಯಗಳು ಹಾಗೂ ಕೋರ್ ವಿಷಯಗಳಿಗೆ ಸಂಬಂಧಿಸಿದಂತೆ 2 ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆ, ದ್ವಿತೀಯ ಭಾಷೆ ಹಾಗೂ ತೃತೀಯ ಭಾಷೆಗೆ ತಲಾ 40 ಅಂಕಗಳಂತೆ ಒಟ್ಟು 120 ಅಂಕಗಳ ಒಂದು ಪರೀಕ್ಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ 40 ಅಂಕಗಳಿಗೆ ಒಟ್ಟು 120 ಅಂಕಗಳ ಪರೀಕ್ಷೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಪರೀಕ್ಷೆ ಸಂಬಂಧ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ವಿವರವಾದ ಸುತ್ತೋಲೆ ತಲುಪಿದ ನಂತರ ಶಾಲೆಗಳಿಗೆ ರವಾನಿಸಲಾಗುತ್ತದೆ. ಪ್ರಶ್ನೆಪತ್ರಿಕೆ ವಿನ್ಯಾಸ ಮತ್ತು ಪರೀಕ್ಷಾ ಪದ್ಧತಿ ಬಗ್ಗೆ ವಿದ್ಯಾರ್ಥಿಗಳಿಗೆ ದೂರವಾಣಿ ಮೂಲಕ ಸೂಕ್ತ ಮಾರ್ಗದರ್ಶನ ನೀಡಿ. ಇಲಾಖೆಯಿಂದ ಸಿದ್ಧಪಡಿಸಿ ನೀಡಲಾಗಿರುವ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಮಾಲಿಕೆ ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳಲ್ಲಿನ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಬೇಕು’ ಎಂದು ವಿವರಿಸಿದರು.

‘ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಅಭ್ಯಾಸದ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಸೂಚಿಸಿ. 8 ಮತ್ತು 9ನೇ ತರಗತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೌಲ್ಯಾಂಕವನ್ನು ಎಸ್‍ಎಟಿಎಸ್‌ನಲ್ಲಿ ದಾಖಲಿಸುವುದು ಕಡ್ಡಾಯ. 2021–22ನೇ ಸಾಲಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಿ’ ಎಂದು ತಿಳಿಸಿದರು.

ಮಾರ್ಗದರ್ಶನ ನೀಡಿ: ‘ಮುಖ್ಯ ಶಿಕ್ಷಕರು, ಶಿಕ್ಷಕರು ಪೋಷಕರು ಮತ್ತು ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪರೀಕ್ಷಾ ಸಿದ್ಧತೆ ಬಗ್ಗೆ ಹಾಗೂ ಬದಲಾದ ಪರೀಕ್ಷಾ ವ್ಯವಸ್ಥೆ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಹೇಳಿದರು.

‘ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಶಿಕ್ಷಕರು ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆಯಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರೀಕ್ಷಾ ಕೇಂದ್ರಗಳನ್ನು ಮರುಪರಿಶೀಲನೆ ಮಾಡಿ ಒಂದು ಕೊಠಡಿಗೆ 10ರಿಂದ 12 ಆಸನಗಳ ವ್ಯವಸ್ಥೆಯಾಗುವಂತೆ ಮತ್ತು ಸೂಕ್ತ ಮೂಲಸೌಕರ್ಯ ಲಭ್ಯವಿರುವಂತೆ ಸಿದ್ಧತೆ ಮಾಡಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT