ಬುಧವಾರ, ಆಗಸ್ಟ್ 17, 2022
26 °C
ಕಾಯಿ ಕೊಯ್ಲಿಗೆ ಕಾರ್ಮಿಕರ ಕೊರತೆ

ಶ್ರೀನಿವಾಸಪುರ: ಹುಣಸೆ ಸುಗ್ಗಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಹುಣಸೆ ಕಾಯಿ ಸುಗ್ಗಿ ಪ್ರಾರಂಭವಾಗಿದೆ. ಗ್ರಾಮೀಣ ಪ್ರದೇಶದ ಜನರು ಹುಣಸೆ ಕಾಯಿ ಕೊಯ್ಲು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಹಿಳೆಯರು ಕಾಯಿ ಆಯುವ ಕಾರ್ಯದಲ್ಲಿ ತೊಡಗಿದ್ದಾರೆ.

ತಾಲ್ಲೂಕಿನಲ್ಲಿ ಒಂಟಿಯಾಗಿ ಹಾಗೂ ಪ್ರತ್ಯೇಕವಾಗಿ ವಿಶಾಲವಾದ ತೋಪುಗಳಲ್ಲಿ ಹುಣಸೆ ಮರಗಳನ್ನು ಬೆಳೆಯಲಾಗಿದೆ. ಭಾರಿ ಗಾತ್ರ ಹಾಗೂ ಎತ್ತರವಾದ ಮರ ಹತ್ತಿ ಕಾಯಿ ಕೀಳುವುದು ಸುಲಭದ ಕೆಲಸವಲ್ಲ. ಆದ್ದರಿಂದಲೇ ಹುಣಸೆ ಕಾಯಿ ಕೀಳಲು ಜನ ಸಿಗುತ್ತಿಲ್ಲ. ಸಿಕ್ಕಿದರೂ ಒಂದಕ್ಕೆರಡರಷ್ಟು ಕೂಲಿ ಕೊಡಬೇಕು.

ಹುಣಸೆ ಕಾಯಿ ಕೊಯಿಲು ಮಾಡಲು ಕೂಲಿಗೆ ಹೋಗುವುದು ಅಪರೂಪ. ಸಾಮಾನ್ಯವಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಕಾಯಿ ಕೊಯ್ಯಲು ಪುರುಷರು ಹಾಗೂ ಕಾಯಿ ಆರಿಸಿ ಮೂಟೆಗೆ ತುಂಬಲು ಮಹಿಳೆಯರು ಒಂದು ತಂಡ ಮಾಡಿಕೊಂಡು, ಇಂತಿಷ್ಟು ಹಣಕ್ಕೆಂದು ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಕಡಿಮೆ ಒಪ್ಪಂದಕ್ಕೆ ಒಪ್ಪುತ್ತಿಲ್ಲ ಎಂಬುದು ಬೆಳೆಗಾರರ ಅಳಲು.

ತಾಲ್ಲೂಕಿನ ಹುಣಸೆ ಬೆಳೆಗಾರರು ಸಾಮಾನ್ಯವಾಗಿ ಫಸಲನ್ನು ಮರಗಳ ಮೇಲೆ ಮಾರಿಬಿಡುತ್ತಾರೆ. ವಿಶೇಷವಾಗಿ ನೆರೆಯ ಆಂಧ್ರಪ್ರದೇಶದ ವ್ಯಾಪಾರಿಗಳು ಹೀಗೆ ಖರೀದಿಸಿ, ಕಾವಲು ಕಾದು, ಕೊಯ್ಲು ಮಾಡಿ, ಹೊಟ್ಟು ಬಿಡಿಸಿ ಕೊಂಡೊಯ್ಯುತ್ತಾರೆ. ಸ್ಥಳೀಯ ವ್ಯಾಪಾರಿಗಳು, ತಾವು ಖರೀದಿಸಿದ ಮರಗಳಿಂದ ಫಸಲು ಪಡೆದ ಬಳಿಕ ಹಣ್ಣು ಮಾಡಿಸಿ ಮಂಡಿಯಲ್ಲಿ ದಾಸ್ತಾನು ಮಾಡಿ, ಒಳ್ಳೆಯ ಬೆಲೆ ಬಂದಾಗ ಮಾರುತ್ತಾರೆ.

ಹುಣಸೆ ಹಣ್ಣನ್ನು ‘ಕಪ್ಪು ಬಂಗಾರ’ ಎಂದು ಕರೆಯಲಾಗುತ್ತದೆ. ಹುಣಸೆ ಹಣ್ಣು ವ್ಯಾಪಾರಿಗಳಿಗೆ ಸಮಾಜದಲ್ಲಿ ವಿಶೇಷ ಗೌರವ ಲಭ್ಯವಾಗುತ್ತಿದ್ದ ಕಾಲವೂ ಒಂದಿತ್ತು. ಕೆಲವು ದಶಕಗಳ ಹಿಂದೆ ಹುಣಸೆ ಹಣ್ಣಿಗೆ ಬೆಲೆ ಕುಸಿತ ಉಂಟಾದ ಪರಿಣಾಮವಾಗಿ, ಹೆಚ್ಚಿನ ಸಂಖ್ಯೆಯ ಬೆಳೆಗಾರರು ಹುಣಸೆ ಮರಗಳಿಗೆ ಕೊಡಲಿ ಹಾಕಿದರು. ಮಾವಿನ ಬೆಳೆಗೆ ಮಣೆ ಹಾಕಿದ ಅವರು, ಮಾವಿನ ಮರಗಳ ಮಧ್ಯದಲ್ಲಿ ಬೆಳೆಯಲಾಗಿದ್ದ ಮರಗಳನ್ನೂ ತೆಗೆದು ಬಿಟ್ಟರು. ಆದರೂ ಪ್ರತ್ಯೇಕವಾಗಿ ಬೆಳೆಯಲಾಗಿರುವ ಹುಣಸೆ ತೋಟಗಳಿಗೆ ಕೊರತೆಯಿಲ್ಲ. ಹುಣಸೆ ಕಾಯಿ ಕೊಯ್ಲಿನೊಂದಿಗೆ, ಕೊಯ್ಲು ಮಾಡಲಾದ ಕಾಯಿಯನ್ನು ಒಣಗಿಸಿ ಹೊಟ್ಟು ತೆಗೆಯುವ ಕಾರ್ಯವೂ ನಡೆಯುತ್ತಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹುಣಸೆ ಕಾಯಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

‘ಕಳೆದ ವರ್ಷ ಈ ಸಂದರ್ಭದಲ್ಲಿ ಒಂದು ಗಾಡಿ (600 ಕೆ.ಜಿ) ಹೊಟ್ಟು ತೆಗೆದ ಹುಣಸೆ ಕಾಯಿ ಬೆಲೆ ₹ 25 ಸಾವಿರ ಇತ್ತು. ಆದರೆ ಈಗ ₹ 18 ಸಾವಿರಕ್ಕೆ ಮಾರಾಟವಾಗುತ್ತಿದೆ’ ಎಂದು ಆಂಧ್ರಪ್ರದೇಶದ ಹುಣಸೆ ಹಣ್ಣಿನ ವ್ಯಾಪಾರಿ ಗಂಗುಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಹಿಂದೆ ಮರದಿಂದ ಉದುರಿಸಿದ ಕಾಯಿಯನ್ನು ಹೊಟ್ಟು ಬಿಡಿಸದೆ ಚೀಲಗಳಿಗೆ ತುಂಬಿ ಹೊರರಾಜ್ಯಗಳಿಗೆ ರವಾನಿಸಲಾಗುತ್ತಿತ್ತು. ಅಲ್ಲಿ ಶೀಥಲಗೃಹದಲ್ಲಿ ದಾಸ್ತಾನು ಮಾಡಿ, ಬೆಲೆ ಬಂದಾಗ ಹೊಟ್ಟು ಬಿಡಿಸಿ ಮಾರಾಟ ಮಾಡುತ್ತಿದ್ದರು. ಆದರೆ ಈಗ ಈ ಪದ್ಧತಿಯನ್ನು ಕೈಬಿಡಲಾಗಿದೆ. ಇದಕ್ಕೆ ಶೀಥಲ ಕೇಂದ್ರದ ಬಾಡಿಗೆ ಹೆಚ್ಚಿಸಿರುವುದು ಕಾರಣ ಎಂದು ಹೇಳಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು