ಮಂಗಳವಾರ, ಜುಲೈ 5, 2022
27 °C
ಜಿಲ್ಲಾ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಜಯದೇವ್ ಹೇಳಿಕೆ

ರಾಜ್ಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಜಿಲ್ಲಾ ಕೇಂದ್ರದಲ್ಲಿ ಜ.31ರಂದು 55ನೇ ರಾಜ್ಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಕೆ.ಜಯದೇವ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಕ್ರೀಡಾಂಗಣಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ವ್ಯವಸ್ಥೆಯಿಲ್ಲದ ಕಾರಣ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇತರೆ ಕ್ರೀಡಾಕೂಟಗಳನ್ನು ಜಿಲ್ಲೆಗೆ ನೀಡುವಂತೆ ಅಸೋಸಿಯೇಷನ್‌ಗೆ ಮನವಿ ಮಾಡಲಾಗಿತ್ತು. ಹಾವೇರಿಯಲ್ಲಿ ನಡೆಸಲು ಉದ್ದೇಶಿಸಿದ್ದ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಜಿಲ್ಲೆಗೆ ನೀಡಲಾಗಿದೆ’ ಎಂದರು.

‘ಒಟ್ಟು 8 ವಿಭಾಗದಲ್ಲಿ ಓಟದ ಸ್ಪರ್ಧೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳ 700ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಅನುಸರಿಸಿ ಕ್ರೀಡಾಕೂಟ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಊಟ, ವಸತಿ ಸೌಲಭ್ಯವು ಕ್ರೀಡಾಪಟುಗಳದ್ದೇ ಜವಾಬ್ದಾರಿ’ ಎಂದು ಹೇಳಿದರು.

‘ನಗರದ ಗಾಂಧಿನಗರ, ಟಮಕ ಬಳಿಯ ಅಗ್ನಿಶಾಮಕ ದಳದ ಕಚೇರಿ, ಟೇಕಲ್ ರಸ್ತೆಯ ಛತ್ರಕೊಡಿಹಳ್ಳಿ, ಶ್ರೀನಿವಾಸಪುರ ರಸ್ತೆ, ಅಂತರಗಂಗೆ ಬೆಟ್ಟದ ರಸ್ತೆ ಹಾಗೂ ಟಿ.ಚನ್ನಯ್ಯ ರಂಗಮಂದಿರ ಬಳಿಯಿಂದ ಓಟದ ಸ್ಪರ್ಧೆ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.

ರಾಷ್ಟ್ರ ಮಟ್ಟದ ಸ್ಪರ್ಧೆ: ‘ಜಲಂಧರ್‌ನಲ್ಲಿ ಫೆ.20ರಂದು ನಡೆಯುವ ರಾಷ್ಟ್ರ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ರಾಜ್ಯದಿಂದ ಕ್ರಿಡಾಪಟುಗಳನ್ನು ಕಳುಹಿಸಬೇಕಿರುವ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯನ್ನು ಕೋಲಾರದಲ್ಲಿ ನಡೆಸಲಾಗುತ್ತಿದೆ’ ಎಂದು ಅಸೋಸಿಯೇಷನ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜುವೇಲು ವಿವರಿಸಿದರು.

‘20 ವರ್ಷ ಮೇಲ್ಪಟ್ಟ ಪುರುಷರಿಗೆ ಹಾಗೂ ಮಹಿಳೆಯರಿಗೆ 10 ಕಿ.ಮೀ, 20 ವರ್ಷದೊಳಗಿನ ಪುರುಷರಿಗೆ 8 ಕಿ.ಮೀ, ಮಹಿಳೆಯರಿಗೆ 6 ಕಿ.ಮೀ, 18 ವರ್ಷದೊಳಗಿನ ಬಾಲಕರಿಗೆ 6 ಕಿ.ಮೀ ಹಾಗೂ ಬಾಲಕಿಯರಿಗೆ 4 ಕಿ.ಮೀ, 16 ವರ್ಷದೊಳಗಿನ ಬಾಲಕರಿಗೆ ಹಾಗೂ ಬಾಲಕಿಯರಿಗೆ 2 ಕಿ.ಮೀ ಹೀಗೆ 8 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು.

‘ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಪುದುಚೇರಿ, ಆಂಧ್ರಪ್ರದೇಶ ಸೇರಿದಂತೆ 7 ರಾಜ್ಯಗಳನ್ನು ಒಳಗೊಂಡ ದಕ್ಷಿಣ ವಲಯ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟವನ್ನು ಕೆಜಿಎಫ್‌ನ ಬೆಮಲ್ ಕ್ರಿಡಾಂಗಣದಲ್ಲಿ ನಡೆಸಲು ಉದ್ದೇಶಿಸಿದ್ದು, ದಿನಾಂಕ ನಿಗದಿಯಾಗಬೇಕಿದೆ’ ಎಂದರು.

ಬೆಂಬಲ ಸಿಗುತ್ತಿಲ್ಲ: ‘ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳ ಆಯೋಜನೆಗೆ ವ್ಯವಸ್ಥೆ ಮಾಡಬೇಕು’ ಎಂದು ಅಸೋಸಿಯೇಷನ್‌ ಜಿಲ್ಲಾ  ಅಧ್ಯಕ್ಷ ಜಗನ್ನಾಥನ್ ಮನವಿ ಮಾಡಿದರು.

ಅಸೋಸಿಯೇಷನ್‌ ಜಿಲ್ಲಾ ಜಂಟಿ ಕಾರ್ಯದರ್ಶಿ ಅಜಯ್, ಅಂತರರಾಷ್ಟ್ರೀಯ ಕ್ರೀಡಾಪಟು ರಾಶಿರಾಜನ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು