ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಪ್ಪ ವಿರುದ್ಧ ಹೇಳಿಕೆ: ಹೋರಾಟದ ಎಚ್ಚರಿಕೆ

ಸಂಸದ ಮುನಿಸ್ವಾಮಿ ಮೇಲೆ ಕಾಂಗ್ರೆಸ್‌ ನಾಯಕರು ಕೆಂಡಾಮಂಡಲ
Last Updated 30 ಆಗಸ್ಟ್ 2019, 13:06 IST
ಅಕ್ಷರ ಗಾತ್ರ

ಕೋಲಾರ: ‘ಸಂಸದ ಮುನಿಸ್ವಾಮಿ ಅವರಿಗೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಮಾತನಾಡುವ ನೈತಿಕತೆಯಿಲ್ಲ. ಅವರು ತಮ್ಮ ನಾಲಿಗೆಗೆ ಕಡಿವಾಣ ಹಾಕಿಕೊಳ್ಳದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸುತ್ತೇವೆ’ ಎಂದು ಕೆಪಿಸಿಸಿ ಸಂಚಾಲಕ ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುನಿಸ್ವಾಮಿ ಅವರು ತಮ್ಮ ಸ್ಥಾನದ ಘನತೆ ಮರೆತು ಹಾದಿ ಬೀದಿಯಲ್ಲಿ ಮುನಿಯಪ್ಪರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ’ ಎಂದು ಕಿಡಿಕಾರಿದರು.

‘ಕ್ಷೇತ್ರದಲ್ಲಿ 28 ವರ್ಷ ಸಂಸದರಾಗಿದ್ದ ಮುನಿಯಪ್ಪ ರಾಷ್ಟ್ರೀಯ ಹೆದ್ದಾರಿ, ಕೈಗಾರಿಕಾ ಕಾರಿಡಾರ್‌ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ, ಹಿಂದಿನ ಚುನಾವಣೆಯಲ್ಲಿ ಸ್ವಪಕ್ಷೀಯರ ತಪ್ಪಿನಿಂದ ಸೋತಿದ್ದಾರೆ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ ಮುನಿಯಪ್ಪ ಖಂಡಿತ ಗೆಲ್ಲುತ್ತಿದ್ದರು. ಯಾವುದೇ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸಹಜ. ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ಸಂಸದರು ಕಾಂಗ್ರೆಸ್ ವಕ್ತಾರರಂತೆ ಹೇಳಿಕೆ ನೀಡುವುದನ್ನು ನಿಲ್ಲಿಸಲಿ’ ಎಂದು ತಾಕೀತು ಮಾಡಿದರು.

‘28 ವರ್ಷಕ್ಕೂ 6 ತಿಂಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಮುನಿಸ್ವಾಮಿ ಅವರಿಗೆ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಎಲ್ಲಾ ಪಕ್ಷಗಳ ಮುಖಂಡರನ್ನು ಕರೆಸಿ ಸಭೆ ನಡೆಸಲಿ. ನಾವೂ ಬೆಂಬಲಿಸುತ್ತೇವೆ. ಅದನ್ನು ಬಿಟ್ಟು ನಮ್ಮ ಪಕ್ಷದ ನಾಯಕರ ವಿರುದ್ಧ ಮಾತನಾಡಿದರೆ ಸುಮ್ಮನಿರುವುದಿಲ್ಲ’ ಎಂದು ಗುಡುಗಿದರು.

ಯೋಗ್ಯತೆಯಿಲ್ಲ: ‘ಹೋದಲ್ಲಿ ಬಂದಲ್ಲಿ ಮುನಿಯಪ್ಪರನ್ನು ಟೀಕಿಸುವುದು ಮುನಿಸ್ವಾಮಿ ಅವರಿಗೆ ಚಪಲವಾಗಿದೆ. ಅವರಿಗೆ ಕಾಂಗ್ರೆಸ್‌ ನಾಯಕರ ಬಗ್ಗೆ ಮಾತನಾಡುವ ಅರ್ಹತೆಯಿಲ್ಲ. ಕೋಲಾರ ಮಾರ್ಗವಾಗಿ ಸಂಚರಿಸುತ್ತಿದ್ದ ನಿಜಾಮುದ್ದೀನ್ ರೈಲು ಸ್ಥಗಿತಗೊಂಡಿದೆ. ಸಂಸದರಿಗೆ ರೈಲು ಸೇವೆ ಪುನರಾರಂಭಿಸುವ ಯೋಗ್ಯತೆಯಿಲ್ಲ’ ಎಂದು ಕಾಂಗ್ರೆಸ್ ಮುಖಂಡ ನಾಗರಾಜ್ ಟೀಕಿಸಿದರು.

‘ಕರ್ನಾಟಕದಿಂದ 25 ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಅವರ ಯೋಗ್ಯತೆಗೆ ₹ 2 ಸಾವಿರ ಕೋಟಿ ತರಲು ಸಾಧ್ಯವಾಗಿಲ್ಲ. ನಮ್ಮ ಪಕ್ಷದ ಮುಖಂಡರ ವಿರುದ್ಧ ಮಾತನಾಡುವ ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ. ಮುನಿಸ್ವಾಮಿ ಅವರು ಮೊದಲು ಸಂಸದನಾಗಿ ನೆಟ್ಟಗೆ ಕೆಲಸ ಮಾಡಲಿ. ಕಾಂಗ್ರೆಸ್‌ ನಾಯಕರ ವಿರುದ್ಧ ಹೇಳಿಕೆ ಕೊಡುವುದನ್ನು ಮುಂದುವರಿಸಿದರೆ ಅವರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದರು.

ಕೆಪಿಸಿಸಿ ರಾಜ್ಯ ಎಸ್ಸಿ ಘಟಕದ ಉಪಾಧ್ಯಕ್ಷ ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಯದೇವ್, ಅಲ್ಪಸಂಖ್ಯಾತರ ಘಟಕದ ಸದಸ್ಯ ಇಕ್ಬಾಲ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT