ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂತ ಕಂಬಳಿ ನೇಯ್ಗೆ: ಕುಸಿದ ‘ತುಪ್ಪಟ’ ಬೆಲೆ

ತುಪ್ಪಟ ಕತ್ತರಿಸುವವರ ಸಂಖ್ಯೆ ಕ್ಷೀಣ; ಹಣ ಕೊಟ್ಟು ಕತ್ತರಿಸುವ ಸ್ಥಿತಿ
Last Updated 12 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಕುರಿ ತುಪ್ಪಟಕ್ಕೆ ಬೇಡಿಕೆ ಇಲ್ಲದ ಪರಿಣಾಮ ಕುರಿಕಾರರು ತಮ್ಮ ಕುರಿಗಳ ತುಪ್ಪಟ ಕತ್ತರಿಸಲು ಹಣ ನೀಡಬೇಕಾಗಿ ಬಂದಿದೆ.

ಈ ಹಿಂದೆ ತುಪ್ಪಟ ಕತ್ತರಿಸುವ ವ್ಯಕ್ತಿಗಳು ನಿಯಮಿತವಾಗಿ ಗ್ರಾಮಗಳಿಗೆ ಭೇಟಿ ನೀಡಿ, ತುಪ್ಪಟ ಕತ್ತರಿಸಿ ಕೊಂಡೊಯ್ಯುತ್ತಿದ್ದರು. ತುಪ್ಪಟಕ್ಕೆ ಬದಲಾಗಿ ಕುರಿ ಹಿಂಡಿನ ಮಾಲೀಕರಿಗೆ ಕುರಿಗಳ ಸಂಖ್ಯೆಗೆ ಅನುಗುಣವಾಗಿ ಒಂದು ಅಥವಾ ಎರಡು ಕಂಬಳಿ ಕೊಡುತ್ತಿದ್ದರು. ಕಂಬಳಿ ಬೇಡವೆಂದರೆ, ಕುರಿಗೆ ಇಂತಿಷ್ಟು ಎಂದು ಹಣ ಕೊಟ್ಟು ಹೋಗುತ್ತಿದ್ದರು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕುರುಬರಲ್ಲಿಯೇ ಕೆಲವರು ತುಪ್ಪಟ ಕತ್ತರಿಸುವ ವೃತ್ತಿ ಮಾಡುತ್ತಿದ್ದರು. ಕುರಿ ಬಂಡಕ್ಕೆ ಬೇಡಿಕೆ ಕುಸಿದ ಮೇಲೆ, ಹೆಚ್ಚಿನ ಸಂಖ್ಯೆಯ ಜನ ತುಪ್ಪಟ ಕತ್ತರಿಸುವ ವೃತ್ತಿಗೆ ಬೆನ್ನುತೋರಿಸಿದ್ದಾರೆ. ಸದ್ಯ ಬಂದು ಕತ್ತರಿಸಿಕೊಂಡು ಹೋದರೆ ಸಾಕು ಅನಿಸಿದೆ. ತುಪ್ಪಟ ಕತ್ತರಿಸಲು ಕುರಿಯೊಂದಕ್ಕೆ ₹ 30 ಕೊಡಬೇಕು. ತುಪ್ಪಟ ಉಚಿತ.

‘ಕತ್ತರಿಸಿದ ತುಪ್ಪಟವನ್ನು ಚೀಲಗಳಿಗೆ ತುಂಬಿ ಒಂದು ಕಡೆ ದಾಸ್ತಾನು ಮಾಡಿದ್ದೇನೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ತುಪ್ಪಟ ₹ 2ರಿಂದ 3ರಂತೆ ಮಾರಾಟವಾಗುತ್ತಿದೆ. ಈ ಬೆಲೆಯಲ್ಲಿ ಸಾಗಾಣಿಕೆ ವೆಚ್ಚವೂ ಬರುವುದಿಲ್ಲ. ಕೋಲಾರ ಕಂಬಳಿ ನೇಯ್ಗೆಗೆ ಪ್ರಸಿದ್ಧಿ ಪಡೆದಿತ್ತು. ಈಗ ಕಂಬಳಿ ಕೇಳುವವರಿಲ್ಲ’ ಎಂದು ತುಪ್ಪಟ ಕತ್ತರಿಸುವ ದೊಡ್ಡಿಗಾನಹಳ್ಳಿ ವೆಂಕಟೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕುರಿಗಳ ಸಂಖ್ಯೆ ಸಾಕಷ್ಟಿದೆ. ತುಪ್ಪಟ ಬೆಳೆದಂತೆ ಕತ್ತರಿಸಬೇಕು. ಇಲ್ಲವಾದರೆ ಮೈ ಕೊಳೆಯಾಗುತ್ತದೆ. ಕೆಲವೊಮ್ಮೆ ಹೇನು ಬೀಳುವುದುಂಟು. ಹಾಗಾಗಿ, ಕುರಿಕಾರರು ಹಣ ನೀಡಿ ತುಪ್ಪಟ ಕತ್ತರಿಸಲು ಮುಂದಾಗಿದ್ದಾರೆ. ಕುರಿಕಾರರು ಒಂದು ಕುರಿ ಬಂಡ ಕತ್ತರಿಸಲು ₹ 40 ತೆರಬೇಕು. ಜತೆಗೆ ತುಪ್ಪಟವನ್ನು ಉಚಿತವಾಗಿ ನೀಡಬೇಕು. ಅಮೂಲ್ಯವಾದ ತುಪ್ಪಟ ದಾಸ್ತಾನು ಮಳಿಗೆಗಳಲ್ಲಿ ಕೊಳೆಯುತ್ತಿದೆ. ಕುರಿ ತುಪ್ಪಟದ ಕಂಬಳಿ ಜನ ಮಾನಸದಿಂದ ಮಾಸುತ್ತಿದೆ.

ರೈತರು ಚಳಿಗಾಲದಲ್ಲಿ ಕಂಬಳಿ ಇಲ್ಲದೆ ಹೊರಗೆ ಹೋಗುತ್ತಿರಲಿಲ್ಲ. ಬೆಳೆ ಕಾವಲಿಗೆ ಹೋಗುವವರನ್ನು ರಾತ್ರಿ ಹೊತ್ತು ಕೊರೆಯುವ ಚಳಿಯಲ್ಲೂ ಬೆಚ್ಚಗೆ ಇಡುತ್ತಿದ್ದುದು ಕುರಿ ಬಂಡದಿಂದ ಮಾಡಿದ ಕಂಬಳಿ. ಕಂಬಳಿ ಚಳಿ ತಡೆಯಲು ಮಾತ್ರ ಸೀಮಿತವಾಗಿಲ್ಲ. ಇದಕ್ಕೆ ಸಾಂಸ್ಕೃತಿಕ ಮಹತ್ವವಿದೆ. ಕುರುಬರಿಗೆ ಕಂಬಳಿ ಹೆಮ್ಮೆಯ ಸಂಕೇತ. ಕಂಬಳಿ ಕುರುಬ ಸಮುದಾಯದ ಸ್ವಾಮೀಜಿಗಳ ಹೆಗಲೇರಿದೆ.

ಬಂತೆ ಬೈರಪ್ಪ ದೇವರಿಗೆ ಕಂಬಳಿ ಸೇವೆ ಮಾಡುವುದುಂಟು. ಸಾಮಾನ್ಯವಾಗಿ ಕಾಡಲ್ಲಿ ಕಟ್ಟುವ ಪುಟ್ಟ ಗುಡಿಯಲ್ಲಿ ಬಂತೆ ಬೈರಪ್ಪನನ್ನು ಪ್ರತಿಷ್ಠಾಪಿಸಿ, ದನಕರು ಕಾಯುವಂತೆ ಪ್ರಾರ್ಥಿಸಿ ಗುಡಿಯ ಮೇಲೆ ಹಳೆ ಕಂಬಳಿ ಹೊದಿಸುವ ಸಂಪ್ರದಾಯ ಇತ್ತು.

ಇಷ್ಟೆಲ್ಲಾ ಮಹತ್ವ ಪಡೆದ ಕಂಬಳಿ ಬದಲಾದ ಪರಿಸ್ಥಿತಿಯಲ್ಲಿ ನೇಪಥ್ಯಕ್ಕೆ ಸರಿಯುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

‘ಸರ್ಕಾರ ಕುರಿ ತುಪ್ಪಟದಿಂದ ಕಂಬಳಿ ತಯಾರಿಸಲು ಪ್ರೋತ್ಸಾಹ ನೀಡಬೇಕು. ಕೈಮಗ್ಗದಿಂದ ತಯಾರಿಸಿದ ಕಂಬಳಿ ಮಾರಾಟಕ್ಕೆ ಅಗತ್ಯ ವ್ಯವಸ್ಥೆ ಮಾಡಬೇಕು’ ಎಂಬುದು ಕಂಬಳಿ ತಯಾರಕರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT