ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಸಾನ್ ಖೇತ್ ಸಂಘಟನೆ ಬಲಪಡಿಸಿ

ಕಾಂಗ್ರೆಸ್‌ ಕಿಸಾನ್ ಖೇತ್ ಪ್ರಧಾನ ಕಾರ್ಯದರ್ಶಿ ಸುಭಾಷ್‌ಗೌಡ ಸಲಹೆ
Last Updated 1 ಆಗಸ್ಟ್ 2020, 16:16 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಕೆಜಿಎಫ್ ಹೊರತುಪಡಿಸಿ ಉಳಿದೆಡೆ ಕಿಸಾನ್ ಘಟಕ ಬಲಿಷ್ಠವಾಗಿದೆ. ಪಕ್ಷ ನಿಷ್ಠರನ್ನು ಸಂಘಟನೆಗೆ ಸೇರಿಸಿಕೊಂಡು ಆಗಸ್ಟ್ ಅಂತ್ಯದೊಳಗೆ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಬೇಕು’ ಎಂದು ಕಾಂಗ್ರೆಸ್‌ ಕಿಸಾನ್ ಖೇತ್ ಪ್ರಧಾನ ಕಾರ್ಯದರ್ಶಿ ಸುಭಾಷ್‌ಗೌಡ ಹೇಳಿದರು.

ಇಲ್ಲಿ ಶನಿವಾರ ಕಾಂಗ್ರೆಸ್‌ ಕಿಸಾನ್ ಖೇತ್ ಜಿಲ್ಲಾ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಪಕ್ಷದಲ್ಲಿ ಇದ್ದುಕೊಂಡು ಹಿಂದಿನ ಚುನಾವಣೆಗಳಲ್ಲಿ ಬೆನ್ನಿಗೆ ಚೂರಿ ಹಾಕಿದವರನ್ನು ಪಕ್ಷದಿಂದ ದೂರ ಇಡಬೇಕು’ ಎಂದರು.

‘ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಆ.3ರಂದು ಜಿಲ್ಲೆಗೆ ಭೇಟಿ ನೀಡುತ್ತಾರೆ. ಆ ದಿನ ಸಮಿತಿ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಒಗ್ಗಟ್ಟು ಪ್ರದರ್ಶಿಸಬೇಕು. ಜಿಲ್ಲೆಯ 156 ಗ್ರಾ.ಪಂ ವ್ಯಾಪ್ತಿಯಲ್ಲಿ ಕಿಸಾನ್ ಖೇತ್ ಸಂಘಟನೆ ಬಲಪಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಸೆಪ್ಟಂಬರ್‌ನಲ್ಲಿ ಜಿಲ್ಲೆಗೆ ಕರೆಸಿ ಬೃಹತ್ ಸಮಾವೇಶ ನಡೆಸಬೇಕು’ ಎಂದು ಸೂಚಿಸಿದರು.

‘ಅಧಿಕಾರಿಗಳು ಕೊರೊನಾ ಸೋಂಕಿನ ಸಬೂಬು ಹೇಳುತ್ತಾ ಬಡ ಜನರ ಹಾಗೂ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬದಲಿಗೆ ಹಣದ ದಂಧೆ ನಡೆಸುತ್ತಿದ್ದಾರೆ. ಅಧಿಕಾರಿಗಳ ವರ್ತನೆ ಖಂಡಿಸಿ ಆ.6ರಂದು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ’ ಎಂದು ಕಾಂಗ್ರೆಸ್‌ ಕಿಸಾನ್ ಖೇತ್ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಹೋರಾಟದ ಕಹಳೆ: ‘ಆಟೊ ಚಾಲಕರು, ಸವಿತಾ ಮತ್ತು ಮಡಿವಾಳ ಸಮುದಾಯದವರಿಗೆ, ರೈತರಿಗೆ ಪರಿಹಾರ ಸಿಕ್ಕಿಲ್ಲ. ರೈತರ ಬದುಕು ಹೀನಾಯವಾಗಿದೆ. 6 ತಿಂಗಳಿಂದ ವಿವಿಧ ಪಿಂಚಣಿಗಳು ಬಂದಿಲ್ಲ. ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜಿಲ್ಲೆಯಿಂದಲೇ ಹೋರಾಟದ ಕಹಳೆ ಮೊಳಗಿಸಬೇಕು. ಸರ್ಕಾರ ಯಾರಿಗೆ ಎಷ್ಟು ಪರಿಹಾರ ನೀಡಿದೆ ಮತ್ತು ಎಷ್ಟು ಅನುದಾನ ಬಳಕೆ ಮಾಡಿದೆ ಎಂಬ ಲೆಕ್ಕ ಕೊಡಬೇಕು’ ಎಂದು ಒತ್ತಾಯಿಸಿದರು.

‘ಬಿಜೆಪಿ ಸರ್ಕಾರ ರೈತರನ್ನು ಕಡೆಗಣಿಸಿ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಸರ್ಕಾರದ ಈ ನಡೆ ರೈತ ಕುಲಕ್ಕೆ ಮಾರಕವಾಗಿದೆ. ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು’ ಎಂದು ಕಾಂಗ್ರೆಸ್‌ ಕಿಸಾನ್ ಖೇತ್ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ್ ಸಲಹೆ ನೀಡಿದರು.

ಪದಾಧಿಕಾರಿಗಳ ಆಯ್ಕೆ: ಕಾಂಗ್ರೆಸ್‌ ಕಿಸಾನ್‌ ಖೇತ್‌ ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿಯಾಗಿ ಅರುಣ್, ಕಾನೂನು ಸಲಹೆಗಾರರಾಗಿ ವಕೀಲ ಕೃಷ್ಣೇಗೌಡ, ಉಪಾಧ್ಯಕ್ಷರಾಗಿ ಸೊಣ್ಣೇಗೌಡ, ಕುಮಾರ್, ತಾಲ್ಲೂಕು ಸಮಿತಿ ಉಪಾಧ್ಯಕ್ಷರಾಗಿ ರಾಮಣ್ಣ, ಕಾರ್ಯಾಧ್ಯಕ್ಷರಾಗಿ ನರಸಿಂಹ, ಆವಣಿ ಬ್ಲಾಕ್ ಅಧ್ಯಕ್ಷರಾಗಿ ಸದಾಶಿವಯ್ಯ, ಕಸಬಾ ಬ್ಲಾಕ್‌ ಅಧ್ಯಕ್ಷರಾಗಿ ಶ್ರೀನಿವಾಸರೆಡ್ಡಿ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ರಾಜ್ಯ ಸಮಿತಿ ಉಪಾಧ್ಯಕ್ಷ ಅಶೋಕ್, ಪದಾಧಿಕಾರಿಗಳಾದ ಶ್ರೀನಿವಾಸ್, ಕೃಷ್ಣಾರೆಡ್ಡಿ, ವೆಂಕಟೇಶ್, ನಾಗರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT