ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ– ಕಾಲೇಜು ಪುನರಾರಂಭ: ಬೆರಳೆಣಿಕೆ ವಿದ್ಯಾರ್ಥಿಗಳು, ನಡೆಯದ ತರಗತಿ

ಹಾಜರಾತಿ ಕಡಿಮೆ
Last Updated 1 ಜನವರಿ 2021, 14:28 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ಕಾರಣಕ್ಕೆ ಬಂದ್‌ ಆಗಿದ್ದ ಶಾಲಾ– ಕಾಲೇಜುಗಳು ಶುಕ್ರವಾರ ಪುನರಾರಂಭವಾದವು. ಆದರೆ, ಮೊದಲ ದಿನ ವಿದ್ಯಾರ್ಥಿಗಳ ಹಾಜರಾತಿ ತೀರಾ ಕಡಿಮೆಯಿತ್ತು.

ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ಆರಂಭಿಸಲಾಯಿತು. ಆದರೆ, ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾದರು. 6ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾಗಮ ಮೂಲಕ ತರಗತಿ ನಡೆಸಲಾಯಿತು.

ಕೋವಿಡ್‌ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಕಾಲೇಜಿನ ಪ್ರತಿ ಕೊಠಡಿಯನ್ನು ಬೆಳಿಗ್ಗೆಯೇ ಸ್ವಚ್ಛಗೊಳಿಸಿ ಸ್ಯಾನಿಟೈಸ್‌ ಮಾಡಲಾಯಿತು. ಪ್ರವೇಶ ಭಾಗದಲ್ಲೇ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಮತ್ತು ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಹಾಕಲಾಯಿತು. ಎಲ್ಲರೂ ಮಾಸ್ಕ್‌ ಧರಿಸಿದ್ದರು.

ಶನಿವಾರ ಪೋಷಕರ ಒಪ್ಪಿಗೆ ಪತ್ರದೊಂದಿಗೆ ಬರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ ತರಗತಿಗೆ ಪ್ರವೇಶ ನೀಡಲಾಯಿತು. ವಿದ್ಯಾರ್ಥಿಗಳಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ತರಗತಿಗಳಲ್ಲಿ ಮೇಜುಗಳ ವ್ಯವಸ್ಥೆ ಮಾಡಲಾಗಿತ್ತು.

ದೀರ್ಘ ಕಾಲದ ಬಳಿಕ ತರಗತಿಗಳು ಆರಂಭವಾದರೂ ವಿದ್ಯಾರ್ಥಿಗಳಲ್ಲಿ ಉತ್ಸಾಹ ಕಾಣಲಿಲ್ಲ. ಕೋವಿಡ್‌ ಆತಂಕದ ಕಾರಣಕ್ಕೆ ಬಹುತೇಕ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ 10ಕ್ಕಿಂತಲೂ ಕಡಿಮೆ ಇತ್ತು. ಮೊದಲ ದಿನವಾದ ಕಾರಣ ಹಾಗೂ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿದ್ದ ಕಾರಣಕ್ಕೆ ಹೆಚ್ಚಿನ ಕಡೆ ತರಗತಿಗಳು ನಡೆಯಲಿಲ್ಲ.

ಕೋವಿಡ್‌ ಪರೀಕ್ಷೆ: ಹಲವೆಡೆ ಶಾಲಾ ಕಾಲೇಜುಗಳಲ್ಲೇ ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ಮಾಡಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿಯೇ ಕಾಲೇಜುಗಳಿಗೆ ಬಂದು ವಿದ್ಯಾರ್ಥಿಗಳ ಗಂಟಲು ದ್ರವದ ಮಾದರಿ ಸಂಗ್ರಹಿಸಿದರು. ವಿದ್ಯಾರ್ಥಿಗಳ ಜತೆಗೆ ಶಿಕ್ಷಕರು, ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿಗೂ ಕೋವಿಡ್‌ ಪರೀಕ್ಷೆ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲು ನಿರ್ಧರಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ದೇಹದ ಉಷ್ಣತೆ ಪ್ರಮಾಣ ಹೆಚ್ಚಿದ್ದರೆ ಅವರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ತರಗತಿ ನಡೆಸಲು ವ್ಯವಸ್ಥೆ ಮಾಡಲಾಗಿದೆ.

ಹಾಜರಾತಿ: ಜಿಲ್ಲೆಯಲ್ಲಿ ಒಟ್ಟಾರೆ 128 ಪದವಿ ಪೂರ್ವ ಕಾಲೇಜುಗಳಿವೆ. ಈ ಪೈಕಿ 32 ಸರ್ಕಾರಿ, 10 ಅನುದಾನಿತ ಮತ್ತು 86 ಅನುದಾನರಹಿತ ಕಾಲೇಜುಗಳು ಸೇರಿವೆ. ಒಟ್ಟಾರೆ 12,774 ಮಂದಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿದ್ದು, ಮೊದಲ ದಿನ ಸುಮಾರು 3,800 ಮಂದಿ ಮಾತ್ರ ತರಗತಿಗೆ ಹಾಜರಾಗಿದ್ದಾರೆ.

ಜಿಲ್ಲೆಯಲ್ಲಿ 356 ಪ್ರೌಢ ಶಾಲೆಗಳಿವೆ. ಇದರಲ್ಲಿ 141 ಸರ್ಕಾರಿ, 59 ಅನುದಾನಿತ ಮತ್ತು 156 ಅನುದಾನರಹಿತ ಶಾಲೆಗಳು ಸೇರಿವೆ. ಸರ್ಕಾರಿ ಪ್ರೌಢ ಶಾಲೆಗಳಲ್ಲಿ 7,673 ಮಂದಿ, ಅನುದಾನಿತ ಪ್ರೌಢ ಶಾಲೆಗಳಲ್ಲಿ 4,320, ಅನುದಾನರಹಿತ ಪ್ರೌಢ ಶಾಲೆಗಳಲ್ಲಿ 8,336 ಮಂದಿ ಹಾಗೂ ಇತರೆ ಪ್ರೌಢ ಶಾಲೆಗಳಲ್ಲಿ 820 ಮಂದಿ ಸೇರಿದಂತೆ ಒಟ್ಟಾರೆ 21,149 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 10,399 ವಿದ್ಯಾರ್ಥಿಗಳು (ಶೇ 49.17) ತರಗತಿಗೆ ಹಾಜರಾಗಿದ್ದಾರೆ. 6ನೇ ತರಗತಿಯಿಂದ 9ನೇ ತರಗತಿವರೆಗಿನ 89,868 ವಿದ್ಯಾರ್ಥಿಗಳಲ್ಲಿ 33,400 ಮಂದಿ (ಶೇ 37.16) ವಿದ್ಯಾಗಮ ತರಗತಿಗೆ ಬಂದಿದ್ದಾರೆ.

ಗುರುವಾರ ತಡರಾತ್ರಿವರೆಗೂ ಅನೇಕ ವಿದ್ಯಾರ್ಥಿಗಳು ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳಿಗೆ ಬಂದಿಲ್ಲ. ಸೋಮವಾರದಿಂದ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT