ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಖುಷಿ | ಮಾಲೂರು: ನೀರಿನ ಸಮಸ್ಯೆ ನಡುವೆ ಹುಲುಸಾದ ಕಬ್ಬು

Published 12 ಜೂನ್ 2024, 7:13 IST
Last Updated 12 ಜೂನ್ 2024, 7:13 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ ನಿದರಮಂಗಲ ಗ್ರಾಮದ ರೈತ ನಾಗಪ್ಪ ಕೋಸು, ಟೊಮೆಟೊ, ಆಲೂಗಡ್ಡೆ ಬೆಳೆದು ಕೈಸುಟ್ಟುಕೊಂಡಿದ್ದರು. ಹಾಕಿದ ಬಂಡವಾಳವೂ ಹಿಂತಿರುಗದೇ ನಿರಾಶರಾಗಿದ್ದರು. ಆದರೆ, ಈಚೆಗೆ ಕಬ್ಬು ಬೆಳೆದು ಲಾಭದತ್ತ ಮುಖಮಾಡಿದ್ದಾರೆ.

ತಮ್ಮ 30 ಗುಂಟೆ ಜಮೀನಿನಲ್ಲಿ ಕಬ್ಬು ಬೆಳೆದಿರುವ ಅವರು ಉತ್ತಮ ಇಳುವರಿ ಪಡೆಯುವ ಜತೆಗೆ ಉತ್ತಮ ಬೆಲೆಗೂ ಮಾರಾಟ ಮಾಡಿ ಯಶಸ್ವಿ ಕೃಷಿಕರಾಗಿದ್ದಾರೆ.

ಈ ಹಿಂದೆ ಕೋಸು, ಟೊಮೊಟೊ, ಆಲೂಗಡ್ಡೆ ಬೆಳೆಗಳಿಗೆ ಹೆಚ್ಚು ಬಂಡವಾಳ ಹಾಕಿ, ಸಮರ್ಪಕ ಬೆಲೆ ಸಿಗದೇ ಕೈಸುಟ್ಟುಕೊಂಡಿದ್ದ ನಾಗಪ್ಪ ಅವರು ಇದೀಗ ಕಬ್ಬು ಬೆಳೆದು ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

30 ಗುಂಟೆ ಕಬ್ಬು ಬೆಳೆಗೆ ₹ 1 ಲಕ್ಷ ಖರ್ಚು ಮಾಡಿದ್ದೇನೆ. ಇದೀಗ ಉತ್ತಮ ಇಳುವರಿ ಪಡೆದು, ₹ 4 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಹಾಕಿದ ಬಂಡವಾಳ ₹ 1 ಲಕ್ಷ ಖರ್ಚು ತೆಗೆದು, ₹ 3 ಲಕ್ಷ ಲಾಭ ಪಡೆದಿದ್ದೇನೆ ಎನ್ನುತ್ತಾರೆ ರೈತ ನಾಗಪ್ಪ.

ಮಾಲೂರು ಭಾಗದ ರೈತರು ಕೃಷಿ ಚಟುವಟಿಕೆಗಳಿಗೆ ಮಳೆ ಆಧಾರಿತ ಇಲ್ಲವೇ ಕೊಳವೆ ಬಾವಿಯ ನೀರಿಗೆ ಅವಲಂಬಿತರಾಗಿದ್ದಾರೆ. 

ಕಬ್ಬು ಬೆಳೆಗೆ ಹೆಚ್ಚು ನೀರು ಅಗತ್ಯವಿರುವುದರಿಂದ ಬಹುತೇಕ ರೈತರು ಈ  ಬೆಳೆ ಬೆಳೆಯಲು ಮುಂದಾಗುವುದಿಲ್ಲ. ಆದರೆ, ಕೊಳವೆ ಬಾವಿಯನ್ನೇ ಮಿತವಾಗಿ ಬಳಸಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ನಾಗಪ್ಪ ಅವರು ಅಗತ್ಯವಿದ್ದಾಗ ಮಾತ್ರ ಕಬ್ಬಿಗೆ ನೀರು ಹಾಯಿಸುತ್ತಾರೆ.

ಆರಂಭದಲ್ಲಿ ಕಬ್ಬು ನಾಟಿ ಮಾಡಲು ಕುಪ್ಪೂರಿನಿಂದ ಸುಮಾರು 900 ಕಬ್ಬನ್ನು ಖರೀದಿಸಿದ್ದರು. 90 ಸೆಂ.ಮೀ. ಅಂತರದ ಬದು ಮತ್ತು ಸಾಲು ಮಾಡಿದ್ದಾರೆ. 60 ಮತ್ತು 90 ಸೆಂ.ಮೀ. ಸಾಲು ಮಾಡಿ ಎರಡು ಸಾಲು ನಾಟಿ ಮಾಡಿ, ಒಂದು ಸಾಲು ಹುಸಿಬಿಟ್ಟಿದ್ದಾರೆ.

ಇದರಿಂದ ಅಂತರದಲ್ಲಿ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯಬಹುದು. ಮುಖ್ಯವಾಗಿ ಶೇ 40ರಷ್ಟು ಪ್ರಮಾಣದಲ್ಲಿ ನೀರು ಉಳಿತಾಯ ಮಾಡಬಹುದು ಎನ್ನುವುದು ನಾಗಪ್ಪ ಅವರ ಅನುಭವದ ಮಾತು.

ಮಾರುಕಟ್ಟೆ: ತಮಿಳುನಾಡಿನ ಹೊಸೂರು ಮತ್ತು ಬೆಂಗಳೂರಿನಿಂದ ವರ್ತಕರು ಕಬ್ಬು ತೋಟದ ಬಳಿ ಬಂದು ವ್ಯಾಪಾರ  ನಡೆಸುತ್ತಾರೆ.

ಸ್ಥಳದಲ್ಲೇ ಹಣ ನೀಡಿ ಅಗತ್ಯಕ್ಕೆ ತಕ್ಕಂತೆ ಕಬ್ಬು ಬೆಳೆಯನ್ನು ಕಠಾವು ಮಾಡಿ ಕೊಂಡೊಯ್ಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT