ಶನಿವಾರ, ಮೇ 28, 2022
25 °C
ಸರ್ಕಾರಿ ನೌಕರರ ಸಂಘದ ಹೊಸ ಬೈಲಾ ತಿದ್ದುಪಡಿ ಗೊಂದಲಕ್ಕೆ ತೆರೆ

ಸುರೇಶ್‌ಬಾಬು ಅಧ್ಯಕ್ಷ: ಷಡಕ್ಷರಿ ಸ್ವಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಯಾರೆಂದು ಸೃಷ್ಟಿಯಾಗಿದ್ದ ಗೊಂದಲಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತೆರೆ ಎಳೆದಿದ್ದು, ಕಾರ್ಯಕಾರಿ ಸಮಿತಿ ಸರ್ವಾನುಮತದ ಆಯ್ಕೆ ಮಾಡಿರುವ ಜಿ.ಸುರೇಶ್‌ಬಾಬು ಅವರು ಅಧ್ಯಕ್ಷರೆಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾ ತಿದ್ದುಪಡಿಗೆ ಏ.15ರಂದು ಅನುಮೋದನೆ ಸಿಗುವ ಮೂಲಕ ಚುನಾಯಿತರಲ್ಲದ ಸಂಘಟನೆಯಲ್ಲಿ ಸಕ್ರಿಯವಾಗಿರುವ ಸದಸ್ಯರನ್ನು ಪದಾಧಿಕಾರಿಗಳಾಗಿ ನೇಮಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಜತೆಗೆ ರಾಜ್ಯ, ಜಿಲ್ಲಾ, ತಾಲ್ಲೂಕು ಸಂಘಗಳಲ್ಲಿ ಅಧ್ಯಕ್ಷರು, ಖಜಾಂಚಿ ಹೊರತುಪಡಿಸಿ ಉಳಿದ ನಾಮನಿರ್ದೇಶಿತ ಪದಾಧಿಕಾರಿಗಳ ಹುದ್ದೆಗಳನ್ನು ರದ್ದುಪಡಿಸಲಾಗಿತ್ತು.

ಬೈಲಾ ತಿದ್ದುಪಡಿ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಯಾರೆಂದು ನೌಕರರ ವಲಯದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಪುರುಷೋತ್ತಮ್ ಎಂಬುವರು ಷಡಕ್ಷರಿ ಅವರಿಗೆ ಸಂದೇಶ ಕಳುಹಿಸಿ ಜಿಲ್ಲಾ ಅಧ್ಯಕ್ಷರು ಯಾರೆಂದು ಸ್ಪಷ್ಟಪಡಿಸುವಂತೆ ಕೋರಿದ್ದರು.

ಇದಕ್ಕೆ ಉತ್ತರಿಸಿರುವ ಷಡಕ್ಷರಿ ಅವರು, ಬೈಲಾ ಪ್ರಕಾರ ಅಧ್ಯಕ್ಷರನ್ನು ಚುನಾಯಿಸುವ ಅಧಿಕಾರಿ ಕಾರ್ಯಕಾರಿ ಸಮಿತಿಗೆ ಇದೆ. ಅದರಂತೆ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿರುವ ಜಿ.ಸುರೇಶ್‌ಬಾಬು ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸುರೇಶ್‌ಬಾಬು ಅವರ ಆಯ್ಕೆಗೆ ನಡೆದ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯಗಳನ್ನು ಒಪ್ಪಿ ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್ ಸಹಿ ಹಾಕಿದ್ದಾರೆ. ಅಲ್ಲದೇ, ಸುರೇಶ್‌ಬಾಬು ಅವರಿಗೆ ಅಧಿಕಾರ ಹಸ್ತಂತರದ ಪತ್ರಕ್ಕೂ ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಪದಾಧಿಕಾರಿಗಳ ನೇಮಕ: ಹೊಸ ಬೈಲಾದಡಿ ಜಿಲ್ಲಾ ಅಧ್ಯಕ್ಷರು ಹೊಸದಾಗಿ ಇತರೆ ಪದಾಧಿಕಾರಿಗಳನ್ನು ನೇಮಿಸಿಕೊಂಡು ರಾಜ್ಯ ಸಂಘದ ಅನುಮೋದನೆಗೆ ಕಳುಹಿಸಿಕೊಡಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ರಾಜ್ಯ ಸಂಘ ಬೈಲಾದಡಿ ಜಿಲ್ಲಾ, ತಾಲ್ಲೂಕು ಸಂಘಗಳಲ್ಲಿ ಯಾವ ಹುದ್ದೆಗಳನ್ನು ಸೃಜಿಸಿ ನಾಮನಿರ್ದೇಶನ ಮಾಡಬಹುದು. ಅದರಂತೆ ನೇಮಕ ಪ್ರಕ್ರಿಯೆ ನಡೆಸಿ ರಾಜ್ಯಾಧ್ಯಕ್ಷರು ಅನುಮೋದನೆ ನೀಡಿದ ನಂತರವೇ ಹೊಸ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.