ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಡಿಗೋಳ್‌ ಪ್ರಕರಣ: ಉನ್ನತ ತನಿಖೆಗೆ ಒತ್ತಾಯ

Last Updated 17 ಸೆಪ್ಟೆಂಬರ್ 2021, 14:25 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್‌ ಕ್ರಾಸ್‌ ಬಳಿ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ಮೇಲೆ ನಡೆದ ದೌರ್ಜನ್ಯ ಸಂಬಂಧ ಉನ್ನತ ತನಿಖೆ ನಡೆಸಬೇಕು’ ಎಂದು ಜಿಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದ ಸದಸ್ಯೆ ಶಾಂತಮ್ಮ ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೌರ್ಜನ್ಯ ಪ್ರಕರಣದ ಎಲ್ಲಾ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಜತೆಗೆ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಹೆಣ್ಣು ಮಕ್ಕಳ ರಕ್ಷಣೆಗೆ ರಾಜ್ಯ ಸರ್ಕಾರ ಪ್ರಬಲ ಕಾನೂನು ಜಾರಿಗೊಳಿಸಬೇಕು’ ಎಂದು ಕೋರಿದರು.

‘ದೇಶದಲ್ಲಿ ದಿನದಿಂದ ಅತ್ಯಾಚಾರ ಪ್ರಕರಣ ಹೆಚ್ಚುತ್ತಿವೆ. ಇದರ ವಿರುದ್ಧ ಮಹಿಳಾ ಸಂಘಟನೆಗಳು ಹೋರಾಟ ನಡೆಸುತ್ತಲೇ ಇವೆ. ಆದರೆ, ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ದೇಶದ ಪ್ರತಿ ಪ್ರಜೆಯು ಮಹಿಳೆಯರ ಹೋರಾಟಕ್ಕೆ ಕೈಜೋಡಿಸಿದರೆ ಸರ್ಕಾರದ ಮೇಲೆ ಒತ್ತಡ ತಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ದೇಶದ ವಿವಿಧೆಡೆ ನಡೆದಿರುವ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಬಂಧ ಧ್ವನಿ ಎತ್ತುತ್ತಿದ್ದೇವೆ. ಆದರೆ, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಪ್ರತಿಭಟನೆ ಮಾಡುವುದಕ್ಕೂ ಪೊಲೀಸರು ಹತ್ತಾರು ಷರತ್ತು ವಿಧಿಸಿ ಕೋವಿಡ್‌ನ ನೆಪವೊಡ್ಡಿ ಅಡ್ಡಿಪಡಿಸುತ್ತಿದ್ದಾರೆ, ಆದರೆ, ರಾಜಕೀಯ ಸಮಾರಂಭ, ಜನಪ್ರತಿನಿಧಿಗಳ ಸಭೆಗೆ ಯಾವುದೇ ಷರತ್ತು, ಕೋವಿಡ್‌ ನಿಯಮ ಅನ್ವಯವಾಗುವುದಿಲ್ಲವೇ?’ ಎಂದು ಪ್ರಶ್ನಿಸಿದರು.

ಪೊಲೀಸರ ಮೀನಮೇಷ: ‘ಶ್ರೀನಿವಾಸಪುರದ ಪ್ರಕರಣದ ಸಂಬಂಧ 60 ಆರೋಪಿಗಳನ್ನು ಎಫ್‌ಐಆರ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆದರೆ, ಈವರೆಗೆ 5 ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಪೊಲೀಸರು ಒತ್ತಡಕ್ಕೆ ಮಣಿದು ಪ್ರಕರಣದ ಇತರೆ ಆರೋಪಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಒಕ್ಕೂಟದ ಸದಸ್ಯೆ ಶಿಲ್ಪಾ ಆರೋಪಿಸಿದರು.

ಒಕ್ಕೂಟದ ಸದಸ್ಯರಾದ ನಳಿನಿಗೌಡ, ಲಕ್ಷ್ಮಮ್ಮ, ನೇತ್ರಾವತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT