ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಚೀನಾ ಕೈಗಾರಿಕೆಗಳ ಆಹ್ವಾನಕ್ಕೆ ಕಾರ್ಯಪಡೆ: ಜಗದೀಶ್‌ ಶೆಟ್ಟರ್

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ
Last Updated 5 ಜೂನ್ 2020, 15:12 IST
ಅಕ್ಷರ ಗಾತ್ರ

ಕೋಲಾರ: ‘ಚೀನಾದಿಂದ ಹೊರ ಹೋಗುತ್ತಿರುವ ಕೈಗಾರಿಕೆಗಳನ್ನು ರಾಜ್ಯಕ್ಕೆ ಆಹ್ವಾನಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆ (ಟಾಸ್ಕ್‌ಫೋರ್ಸ್‌) ಸಮಿತಿ ರಚಿಸಲಾಗಿದೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ತಾಲ್ಲೂಕಿನ ವೇಮಗಲ್ ಮತ್ತು ನರಸಾಪುರ ಗ್ರಾಮದಲ್ಲಿ 2ನೇ ಹಂತದ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಪ್ರಸ್ತಾಪಿತ ಜಮೀನುಗಳನ್ನು ಪರಿಶೀಲಿಸಿ ಮಾತನಾಡಿ, ‘ಕೊರೊನಾ ಸೋಂಕು ಹರಡುವಿಕೆ ವಿಚಾರದಲ್ಲಿ ಇಡೀ ವಿಶ್ವ ಚೀನಾ ವಿರುದ್ಧ ಆಕ್ರೋಶಗೊಂಡಿದೆ’ ಎಂದು ಹೇಳಿದರು.

‘ಹಲವು ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ಹೊರ ಹೋಗುವ ಮಾತನ್ನಾಡುತ್ತಿವೆ. ಕಾರ್ಯಪಡೆ ಸಮಿತಿಯು ಅಂತಹ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯುವ ಕೆಲಸ ಮಾಡುತ್ತಿದೆ. ಈಗಾಗಲೇ ಹಲವು ಬಾರಿ ಸಭೆ ನಡೆಸಿರುವ ಕಾರ್ಯಪಡೆಯು ಚೀನಾದಿಂದ ಬರುವ ಕೈಗಾರಿಕೆಗಳಿಗೆ ಆಹ್ವಾನ ನೀಡುವುದರ ಜತೆಗೆ ಕೈಗಾರಿಕೆಗಳು ಕೇಳುವ ಸೌಲಭ್ಯ ಒದಗಿಸುವ ಬಗ್ಗೆ ಸಮಾಲೋಚನೆ ನಡೆಸಲಿದೆ’ ಎಂದು ವಿವರಿಸಿದರು.

‘ರಾಜ್ಯದಲ್ಲಿ ಕೈಗಾರಿಕೆ ಸ್ನೇಹಿ ವಾತಾವರಣ ಸೃಷ್ಟಿಸಲು ಕ್ರಮ ಕೈಗೊಂಡಿದ್ದು, ಈಗಾಗಲೇ ಕೈಗಾರಿಕಾ ನೀತಿ ಬದಲಾಗಿದೆ. ರಾಜ್ಯಕ್ಕೆ ಬರುವ ಕೈಗಾರಿಕೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವುದರ ಜತೆಗೆ ಅನುಮತಿ ಪಡೆಯಲು ಇದ್ದ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ರಾಜ್ಯವನ್ನು ಕೈಗಾರಿಕೆ ಅಭಿವೃದ್ಧಿಯಲ್ಲಿ ದೇಶದಲ್ಲೇ ನಂ.1 ಆಗಿಸಲು ಪ್ರಯತ್ನ ನಡೆಸಲಾಗಿದೆ. ರಾಜ್ಯಕ್ಕೆ ಮುಂದೆ ಉತ್ತಮ ಭವಿಷ್ಯವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಏಕಗವಾಕ್ಷಿ ಯೋಜನೆಯಡಿ ಕೈಗಾರಿಕೆಗಳಿಗೆ ತಕ್ಷಣವೇ ಭೂಮಿ ಕೊಡಲಾಗುವುದು. ಡೀಮ್ಡ್ ಪರ್ಮಿಷನ್ ಮೂಲಕ ಮತ್ತಷ್ಟು ಕೈಗಾರಿಕೆ ಅಭಿವೃದ್ಧಿಪಡಿಸಲಾಗುವುದು. ಜಿಲ್ಲೆಯಲ್ಲಿನ ರೈಲ್ಚೆ ವರ್ಕ್‌ಶಾಪ್‌ ಸ್ಥಾಪನೆಗೆ ರಾಜ್ಯ ಸರ್ಕಾರದ ಪಾಲು ಕೊಡಲಾಗುವುದು’ ಎಂದು ಭರವಸೆ ನೀಡಿದರು.

ಕಾರಿಡಾರ್ ನಿರ್ಮಾಣ: ‘ಬೃಹತ್ ಕಾರಿಡಾರ್ ಕೋಲಾರ–ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರೀತಿ ನಿರ್ಮಾಣವಾಗಲಿದ್ದು, ಇದು ಪೂರ್ಣಗೊಂಡರೆ ಜಿಲ್ಲೆಗೆ ಹೆಚ್ಚಿನ ಕೈಗಾರಿಕೆಗಳು ಬರಲಿವೆ. ಈಗಾಗಲೇ ನರಸಾಪುರ, ವೇಮಗಲ್, ಮುಳಬಾಗಿಲು, ಮಾಲೂರು ಸೇರಿದಂತೆ ಹಲವೆಡೆ ಕೈಗಾರಿಕೆಗಳು ಆರಂಭವಾಗಿವೆ’ ಎಂದು ಮಾಹಿತಿ ನೀಡಿದರು.

‘ಬೆಂಗಳೂರಿನಲ್ಲಿ ಕೈಗಾರಿಕೆಗಳ ಒತ್ತಡ ಕಡಿಮೆ ಮಾಡಲು ಕೋಲಾರ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. 2ನೇ ಹಂತದಲ್ಲಿ ಕೋಲಾರ, ನರಸಾಪುರ, ಕೆಜಿಎಫ್‌ನ ಬಿಜಿಎಂಎಲ್ ಪ್ರದೇಶಕ್ಕೆ ಕೈಗಾರಿಕೆಗಳು ಬರಲು ಪ್ರಸ್ತಾವವಿದೆ. ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರಕ್ಕೂ ಕೈಗಾರಿಕೆಗಳು ಬರಲಿವೆ’ ಎಂದು ವಿವರಿಸಿದರು.

ದೊಡ್ಡ ಹೊಡೆತ: ‘ಕೊರೊನಾ ಸೋಂಕಿನಿಂದ ಮುಂದುವರಿದ ರಾಷ್ಟ್ರಗಳ ಕೈಗಾರಿಕೆಗಳಿಗೂ ದೊಡ್ಡ ಹೊಡೆತ ಬಿದ್ದಿದೆ. ಸೋಂಕು ಇಡೀ ಜಗತ್ತಿನಲ್ಲೇ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ. ಆದರೂ ಇಡೀ ದೇಶದಲ್ಲೇ ಕೈಗಾರಿಕೆ ಚಟುವಟಿಕೆ ಆರಂಭವಾಗಿರುವುದು ರಾಜ್ಯದಲ್ಲೇ. ಹಂತ ಹಂತವಾಗಿ ಲಾಕ್‌ಡೌನ್‌ ಸಡಿಲಿಕೆ ಮಾಡುತ್ತಾ ಕೈಗಾರಿಕೆಗಳು ಆರಂಭವಾಗುತ್ತವೆ’ ಎಂದರು.

‘ಸೋಂಕಿನ ಭಯಕ್ಕೆ ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ವಾಪಸ್‌ ಹೋಗಿದ್ದಾರೆ. ಒಂದು ತಿಂಗಳಲ್ಲಿ ಅವರೆಲ್ಲಾ ವಾಪಸ್‌ ಬರುವ ವಿಶ್ವಾಸವಿದೆ. ಕೊರೊನಾ ಸೋಂಕಿನಿಂದ ಜೀವ ರಕ್ಷಣೆಯ ಜತೆಗೆ ಜೀವನ ನಡೆಸುವುದು ಹೇಗೆ ಎಂಬುದು ಮುಖ್ಯವಾಗಿದ್ದು, ಇದನ್ನು ಗಮನಿಸಿಯೇ ಹಂತಹಂತವಾಗಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT