ಗುರುವಾರ , ಸೆಪ್ಟೆಂಬರ್ 23, 2021
21 °C

ಶಿಕ್ಷಕರ ಸೇವೆಗೆ ಬೆಲೆ ಕಟ್ಟಲಾಗದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್‌ ಸಂಕಷ್ಟದ ಸಮಯದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಜಾಗೃತಿ ವಹಿಸಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ನಿಜಕ್ಕೂ ಕೊರೊನಾ ಸೇನಾನಿಗಳು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಶ್ಲಾಘಿಸಿದರು.

ಶಿಕ್ಷಕರ ಗೆಳೆಯರ ಬಳಗ ಹಾಗೂ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಸಹಯೋಗದಲ್ಲಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ‘ಕೋವಿಡ್‌ ಎಲ್ಲರಿಗೂ ಪಾಠ ಕಲಿಸಿದೆ. ಇಡೀ ವ್ಯವಸ್ಥೆ ಸ್ಥಗಿತಗೊಂಡು ಆರ್ಥಿಕ ನಷ್ಟ ಮತ್ತು ಪ್ರಾಣಹಾನಿ ಉಂಟಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಶಿಕ್ಷಣವು ಅತ್ಯಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕೋವಿಡ್‌ ಆತಂಕದ ನಡುವೆಯೂ ಶಿಕ್ಷಕರು ಜೀವದ ಹಂಗು ತೊರೆದು ಇಲಾಖೆ ಆದೇಶದನ್ವಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಸೇವೆಗೆ ಬೆಲೆ ಕಟ್ಟಲಾಗದು. ಆನ್‌ಲೈನ್‌ ಮೂಲಕ, ವಿದ್ಯಾಗಮ ಮತ್ತು ಸಂವೇದ ಕಾರ್ಯಕ್ರಮ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗದಂತೆ ಶಿಕ್ಷಕರು ಕಾರ್ಯ ನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ದೇಶದ ಭವಿಷ್ಯ ಶಾಲಾ ಕೊಠಡಿಯ 4 ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ ಎಂಬ ಮಾತಿದೆ. ಆದರೆ, ಮಕ್ಕಳನ್ನು ಅಂಕ ಗಳಿಕೆಗೆ ಸೀಮಿತ ಮಾಡುವುದು ಬೇಡ. ಮಕ್ಕಳಲ್ಲಿ ಜ್ಞಾನ ತುಂಬಿ. ಜಾತಿ ಮತಕ್ಕಿಂತ ಶಿಕ್ಷಣ ಧರ್ಮ ಮುಖ್ಯ’ ಎಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಸಲಹೆ ನೀಡಿದರು.

ನಗರಸಭೆ ಸದಸ್ಯ ಪ್ರವೀಣ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಸಿ ನಾಗೇಶ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಪ್ರಭಾರ ಬಿಇಒ ಎ.ಬಿ.ರಾಮಕೃಷ್ಣಪ್ಪ, ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ,ಶ್ರೀನಿವಾಸ್, ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.