ಗುರುವಾರ , ಜನವರಿ 21, 2021
23 °C

ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ: ಪೋಷಕರ ಮಡಿಲು ಸೇರಿದ ಬಾಲಕ; ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಬಾಲಕ ಅನುಭವ್ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಪೊಲೀಸರು ಜಿಲ್ಲೆಯ ಮಾಲೂರು ತಾಲ್ಲೂಕಿನ ಕೂರ್ನಹೊಸಹಳ್ಳಿಯಲ್ಲಿ ಶನಿವಾರ ಅಪಹರಣಕಾರರನ್ನು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ಹೊಡದನಹಳ್ಳಿಯ ಗಂಗಾಧರ (25), ಮಂಡ್ಯ ಜಿಲ್ಲೆ ಕರಡಕೆರೆ ಗ್ರಾಮದ ಹನುಮಂತ (21) ಮತ್ತು ಹುಲ್ಲುಕೆರೆ ಗ್ರಾಮದ ಎಚ್‌.ಪಿ.ರಂಜಿತ್‌ (22), ಬೆಂಗಳೂರಿನ ಎಲೆಕ್ಟ್ರಾನಿಕ್‌ಸಿಟಿಯ ಕಮಲ್‌ (23), ಕೂರ್ನಹೊಸಹಳ್ಳಿಯ ಮಂಜುನಾಥ್‌ (24) ಮತ್ತು ಮಹೇಶ್‌ಕುಮಾರ್‌ (26) ಬಂಧಿತರು.

ಉಜಿರೆಯ ಉದ್ಯಮಿ ಬಿಜೋಯ್‌ ಅವರ ಮಗ 8 ವರ್ಷದ ಅನುಭವ್‌ ಗುರುವಾರ (ಡಿ.17) ಮನೆಯಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಆರೋಪಿಗಳು ಕಾರಿನಲ್ಲಿ ಬಂದು ಆತನನ್ನು ಅಪಹರಿಸಿದ್ದರು. ಬಳಿಕ ಬಾಲಕನ ಪೋಷಕರಿಗೆ ಕರೆ ಮಾಡಿ ಬಿಟ್ ಕಾಯಿನ್ ರೂಪದಲ್ಲಿ ₹ 17 ಕೋಟಿ ಕೊಡುವಂತೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಬಾಲಕನ ಅಜ್ಜ ಎ.ಕೆ.ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ಪತ್ತೆಗೆ 4 ವಿಶೇಷ ಪೊಲೀಸ್‌ ತಂಡ ರಚಿಸಲಾಗಿತ್ತು.

ಅಪಹರಣಕಾರರು ಬಾಲಕನನ್ನು ಹಾಸನ, ಬೆಂಗಳೂರು ಸೇರಿದಂತೆ ವಿವಿಧೆಡೆ ಸುತ್ತಾಡಿಸಿದ್ದರು. ಪೊಲೀಸರ ತಂಡವು ಆರೋಪಿಗಳ ಮೊಬೈಲ್‌ ಕರೆ ಮಾಹಿತಿ ಆಧರಿಸಿ ಅವರನ್ನು ಬೆನ್ನಟ್ಟಿತ್ತು. ಅಪಹರಣಕಾರರು ಶುಕ್ರವಾರ ತಡರಾತ್ರಿ ಕೂರ್ನಹೊಸಹಳ್ಳಿಯ ಸ್ನೇಹಿತ ಮಹೇಶ್‌ ಮನೆಗೆ ಬಂದು ಆಶ್ರಯ ಪಡೆದಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಅವರಿಗೆ ಮಾಹಿತಿ ನೀಡಿ ಆರೋಪಿಗಳ ಬಂಧನಕ್ಕೆ ನೆರವು ಕೋರಿದ್ದರು.

ಎಸ್ಪಿ ಕಾರ್ತಿಕ್‌ರೆಡ್ಡಿ ನೇತೃತ್ವದಲ್ಲಿ ಶನಿವಾರ ಬೆಳಗಿನ ಜಾವ ಜಂಟಿ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಮತ್ತು ಮಾಲೂರಿನ ಮಾಸ್ತಿ ಠಾಣೆ ಪೊಲೀಸರು ಆರೋಪಿಗಳಿರುವ ಮನೆ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅನುಭವ್‌ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾನೆ. ಮಗ ಪತ್ತೆಯಾಗಿರುವ ಸಂಗತಿ ತಿಳಿದು ಸಂಜೆ ಮಾಲೂರಿಗೆ ಬಂದ ಬಿಜೋಯ್‌ ದಂಪತಿ, ‘ಮಗ ಸುರಕ್ಷಿತವಾಗಿದ್ದು, ಹೋದ ಜೀವ ಬಂದಂತಾಗಿದೆ. ದೇವರು ದೊಡ್ಡವನು. ಪೊಲೀಸರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದು ಭಾವುಕರಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು