ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕಳೆಗಟ್ಟಿದ ಸುಗ್ಗಿ ಹಬ್ಬದ ಸಂಭ್ರಮ

ರಾಸುಗಳ ಸಾಮೂಹಿಕ ಮೆರವಣಿಗೆ: ದೇವಾಲಯಗಳಲ್ಲಿ ವಿಶೇಷ ಪೂಜೆ
Last Updated 14 ಜನವರಿ 2021, 14:45 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಾದ್ಯಂತ ಗುರುವಾರ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಸಂಭ್ರಮ ಕಳೆಗಟ್ಟಿತು. ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯ ಕಾಲದ ಸಂಕ್ರಾಂತಿಯನ್ನು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮಹಿಳೆಯರು ಮನೆ ಮುಂದೆ ನಸುಕಿನಲ್ಲೇ ಬಣ್ಣ ಬಣ್ಣದ ರಂಗೋಲಿ ಹಾಕಿ ಅಂಗಳವನ್ನು ಚಿತ್ತಾರಗೊಳಿಸಿದ್ದರು. ಬಹುತೇಕ ಮನೆಗಳ ಮುಂದೆ ಹಬ್ಬದ ಶುಭಾಶಯ ಕೋರುವ ರಂಗೋಲಿ ಸಾಮಾನ್ಯವಾಗಿತ್ತು. ಮನೆಯ ಬಾಗಿಲಿಗೆ ತಳಿರು ತೋರಣ ಕಟ್ಟಿ ಹೂಗಳಿಂದ ಸಿಂಗರಿಸಲಾಗಿತ್ತು.ಗ್ರಾಮೀಣ ಭಾಗದಲ್ಲಿ ಸಂಪ್ರದಾಯದಂತೆ ಸಗಣಿಯಿಂದ ಬೆನಪ ಮಾಡಿ ಬಾಗಿಲ ಮುಂದೆ ಇಟ್ಟು, ದವಸ ಧಾನ್ಯ ದಾನ ಮಾಡಲಾಯಿತು.

ರೈತರು ಉತ್ಸಾಹದಿಂದ ಹಬ್ಬ ಆಚರಿಸಿದರು. ದೇವಸ್ಥಾನಗಳನ್ನು ತೋರಣಗಳಿಂದ ಸಿಂಗರಿಸಲಾಗಿತ್ತು. ಕೋಲಾರಮ್ಮ, ಸೋಮೇಶ್ವರ, ವೆಂಕಟರಮಣಸ್ವಾಮಿ, ಕೊಂಡರಾಜನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ದೇವರ ದರ್ಶನಕ್ಕಾಗಿ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ದೇವರಿಗೆ ಅಭಿಷೇಕ ಮಾಡಲಾಯಿತು. ಪೂಜೆಯ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ರಾಸುಗಳ ಮೆರವಣಿಗೆ: ಮನೆಗಳಲ್ಲಿ ಹಬ್ಬಕ್ಕಾಗಿ ಸಿಹಿ ಪೊಂಗಲ್‌, ಅವರೆಕಾಳು ಸಾಂಬರು, ಬೋಂಡ, ಮಸಾಲ ವಡೆ, ಪಾಯಸ, ಕಿಚಡಿ, ಕೋಸಂಬರಿ ಸೇರಿದಂತೆ ವಿವಿಧ ಭಕ್ಷ್ಯ ಸಿದ್ಧಪಡಿಸಲಾಗಿತ್ತು. ಪೂಜೆಯ ನಂತರ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಹಬ್ಬದೂಟ ಸವಿದರು. ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ ಮನೆ ಮನೆಗೆ ತೆರಳಿ ಎಳ್ಳು ಬೆಲ್ಲ ಹಂಚಿ ಹಬ್ಬದ ಶುಭಾಶಯ ಕೋರಿದರು.

ವರ್ಷವಿಡೀ ಜಮೀನುಗಳಲ್ಲಿ ರೈತರೊಂದಿಗೆ ಹೆಗಲು ಕೊಟ್ಟು ದುಡಿದ ರಾಸುಗಳ ಮೈ ತೊಳೆದು ಕೊಂಬುಗಳಿಗೆ ಬಣ್ಣ ಬಳಿದು ಅಲಂಕಾರ ಮಾಡಲಾಗಿತ್ತು. ರಾಸುಗಳ ಸಾಮೂಹಿಕ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿ, ಸಂಜೆ ಕಿಚ್ಚು ಹಾಯಿಸಲಾಯಿತು. ರೈತರು ಕಿಚ್ಚು ಹಾಯುವ ರಾಸುಗಳೊಂದಿಗೆ ಓಡುತ್ತಾ ಸಂಭ್ರಮಿಸಿದರು. ರೈತ ಮಹಿಳೆಯರು ಮನೆ ಮನೆಗೆ ತೆರಳಿ ಸುಗ್ಗಿ ಹಾಡು ಹಾಡಿ ದವಸ ಧಾನ್ಯ ಸಂಗ್ರಹಿಸಿದರು.

ಹಬ್ಬ ಆಚರಣೆಯಿಲ್ಲ: ಸಂಕ್ರಾಂತಿ ಹಬ್ಬವೆಂದರೆ ಎಲ್ಲೆಡೆ ಸಂಭ್ರಮ ಸಹಜ. ಆದರೆ, ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಈ ಹಬ್ಬವನ್ನು ಸೂತಕದಂತೆ ಆಚರಿಸಲಾಗುತ್ತದೆ. ಗ್ರಾಮದಲ್ಲಿ ಸಂಕ್ರಾಂತಿ ಹಬ್ಬ ಮಾಡಿ ಹಲವು ದಶಕಗಳೇ ಕಳೆದಿವೆ.

ಗ್ರಾಮದಲ್ಲಿ ಸುಮಾರು 300 ವರ್ಷಗಳ ಹಿಂದೆ ಸಂಕ್ರಾಂತಿ ಹಬ್ಬದಂದು ಜಾನುವಾರುಗಳು ಕಾಲರ ಮಾದರಿಯ ಕಾಯಿಲೆಯಿಂದ ಸಾಮೂಹಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಬ್ಬದ ಆಚರಣೆ ನಿಲ್ಲಿಸಿದರು. ಪೂರ್ವಜರ ಈ ನಿರ್ಧಾರವನ್ನು ಗ್ರಾಮಸ್ಥರು ಪಾಲಿಸಿಕೊಂಡು ಹೋಗುತ್ತಿದ್ದಾರೆ.

ಸಂಕ್ರಾಂತಿ ಆಚರಿಸಿದರೆ ರಾಸುಗಳು ಸಾಯುತ್ತವೆ ಎಂಬ ಭಯ ಗ್ರಾಮಸ್ಥರಲ್ಲಿದೆ. ಹೀಗಾಗಿ ಗ್ರಾಮದ ಯಾವುದೇ ಕುಟುಂಬ ಸಂಕ್ರಾಂತಿ ಹಬ್ಬ ಆಚರಿಸುವುದಿಲ್ಲ. ಅದೇ ರೀತಿ ಈ ಬಾರಿಯೂ ಹಬ್ಬ ಆಚರಿಸಲಿಲ್ಲ. ಗ್ರಾಮದಲ್ಲಿ ರಾಸುಗಳನ್ನು ಕಿಚ್ಚು ಹಾಯಿಸಲಿಲ್ಲ ಮತ್ತು ಮನೆಗಳಲ್ಲಿ ಹಬ್ಬದ ಸಂಭ್ರಮ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT